ಮಂಡ್ಯ: ಕಳೆದ ಬಾರಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಪರ ಪ್ರಚಾರ ಮಾಡಿದ್ದ ನಟ ದರ್ಶನ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತ ಯಾಚಿಸಿ ಗಮನ ಸೆಳೆದಿದ್ದಾರೆ. ಮಳವಳ್ಳಿ ತಾಲೂಕಿನ ಹಲಗೂರು, ಟಿ.ಕೆ. ಹಳ್ಳಿ, ಹುಸ್ಕೂರು, ಹಾಡ್ಲಿ ಸರ್ಕಲ್, ಬೆಳಕವಾಡಿ, ಬಿ.ಜಿ.ಪುರ, ಸರಗೂರು ಹ್ಯಾಂಡ್ ಪೋಸ್ಟ್, ಪೂರಿಗಾಲಿ, ಟಿ ಕಾಗೇಪುರ, ದುಗ್ಗನಹಳ್ಳಿ, ಮಳವಳ್ಳಿ ನಗರ ಸೇರಿದಂತೆ ಹಲವೆಡೆ ದರ್ಶನ್ ಚುನಾವಣಾ ಪ್ರಚಾರ ನಡೆಸಿದ್ದಾರೆ. ರೋಡ್ ಶೋ ನಡೆಸಿದ ಅವರು ಹಲಗೂರಿನಲ್ಲಿ ಮಾತನಾಡಿ, ನಾನು ಯಾವುದೇ ಪಕ್ಷದ ಪರ ಅಲ್ಲ, ವ್ಯಕ್ತಿಯ ಪರ. ತಪ್ಪು ಸಂದೇಶ ಹೋಗಬಾರದು ಎಂದು ವಿನಂತಿಸಿದರು.
ಐದು ವರ್ಷಗಳ ಹಿಂದೆ ನರೇಂದ್ರ ಸ್ವಾಮಿಯವರು ಮಾಡಿದ ಸಹಾಯ ಮರೆಯಲಾಗುವುದಿಲ್ಲ. ಸುಮಕ್ಕ ಅವರಿಗೆ ಈ ಬಾರಿ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಬೆಂಬಲ ನೀಡಬೇಕು ಎಂದು ಶಾಸಕ ಉದಯ ಅವರು ತಮ್ಮ ಜೊತೆ ಮೊದಲೇ ಮಾತುಕತೆ ನಡೆಸಿದ್ದರು. ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಿ ಪಿ ಎಂ ನರೇಂದ್ರ ಸ್ವಾಮಿ ಮತ್ತು ಉದಯ ಅವರ ಕೈ ಬಲಪಡಿಸಬೇಕು ಎಂದು ದರ್ಶನ್ ಮನವಿ ಮಾಡಿದರು. ರೋಡ್ ಶೋ ಉದ್ದಕ್ಕೂ ದರ್ಶನ್ ಅಲ್ಲಲ್ಲಿ ಭಾಷಣ ಮಾಡಿ ಮತಯಾಚಿಸಿದರು. ಸ್ಟಾರ್ ಚಂದ್ರು ಅನುಪಸ್ಥಿತಿಯಲ್ಲಿ ಅವರು ಮತಯಾಚಿಸಿದರು. ಪಿಎಂ ನರೇಂದ್ರ ಸ್ವಾಮಿ, ಮರಿತಿಬ್ಬೇಗೌಡ ಉಪಸ್ಥಿತರಿದ್ದರು.