ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ ಮತ್ತು ಅವರ ಪತಿ ಭುವನ್ ಪೊನ್ನಣ್ಣ ಮೇಲೆ ಅನ್ಯ ಕೋಮಿನ ಪುಂಡರ ಗುಂಪೊಂದು ಹಲ್ಲೆ ನಡೆಸಿ ಪುಂಡಾಟಿಕೆ ಮೆರೆದ ಘಟನೆ ನಡೆದಿದೆ. ಈ ಬಗ್ಗೆ ನಟಿ ತಮ್ಮ ಸಾಮಾಜಿಕ ಜಾಲ ತಾಣ ಖಾತೆಯಲ್ಲಿ ಬರೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಾವು ಸ್ಥಳೀಯರು ಎಷ್ಟು ಸುರಕ್ಷಿತ ಎಂದು ಅವರು ಪ್ರಶ್ನಿಸಿದ್ದಾರೆ. ಒಂದೆರಡು ದಿನಗಳ ಹಿಂದೆ ಫ್ರೇಜರ್ ಟೌನ್ ಪ್ರದೇಶ ಸಮೀಪದ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ ಕರಾಮ ಎಂಬ ರೆಸ್ಟೋರೆಂಟ್ ನಲ್ಲಿ ಕುಟುಂಬದೊಂದಿಗೆ ಊಟ ಮಾಡಲು ತೆರಳಿದ್ದೆ. ಊಟ ಮುಗಿಸಿ ತಮ್ಮ ವಾಹನದಲ್ಲಿ ತೆರಳುವ ವೇಳೆ ಇಬ್ಬರು ಬಂದು ಅನಗತ್ಯವಾಗಿ ಚರ್ಚೆ ಆರಂಭಿಸಿದರು. ಆದರೆ ತಮ್ಮ ಪತಿ ತಾಳ್ಮೆಯಿಂದಿದ್ದು, ವಾಹನ ತೆಗೆಯುವ ವೇಳೆ ಹೆಚ್ಚು ಮಾತನಾಡಲಿಲ್ಲ. ಆದರೆ ಅಷ್ಟರಲ್ಲಿ ಅಲ್ಲಿ ಇಪ್ಪತ್ತು-ಮುವತ್ತು ಮಂದಿ ಒಟ್ಟು ಸೇರಿ ಕಿರುಕುಳ ನೀಡಿದರು. ಅದರಲ್ಲಿ ಇಬ್ಬರು ತಮ್ಮ ಚಿನ್ನದ ಸರ ಕಿತ್ತುಕೊಳ್ಳಲು ಮುಂದಾಗಿದ್ದು, ಅದನ್ನು ಅರಿತ ತಮ್ಮ ಪತಿ ಅದನ್ನು ತಡೆದರು ಮತ್ತು ಚಿನ್ನದ ಸರ ತನಗೆ ನೀಡಿದರು ಎಂದು ಪೂಣಚ್ಚ ತಿಳಿಸಿದ್ದಾರೆ.
ತಾವು ಕನ್ನಡದಲ್ಲಿ ಮಾತನಾಡುವುದು ಇವರಿಗೆ ಸಮಸ್ಯೆ ಎಂಬಂತೆ ಕಂಡುಬಂತು. ಅವರು ಬೇರೆ ಭಾಷೆಯಲ್ಲಿ ತಮ್ಮನ್ನು ನಿಂದಿಸುತ್ತಿದ್ದರು. ತಾವು ಕನ್ನಡದಲ್ಲಿ ಮಾತನಾಡಿದಾಗ ಇವರು ಸ್ಥಳೀಯ ಕನ್ನಡ ವ್ಯಕ್ತಿಗಳು ಎಂದು ತಮ್ಮ ಭಾಷೆಯಲ್ಲಿ ಆಡಿಕೊಳ್ಳುತ್ತಿದ್ದರು ಎಂದು ಬರೆದುಕೊಂಡು ಪೂಣಚ್ಚ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಈ ವೇಳೆ ಹತ್ತಿರದಲ್ಲೇ ಪೊಲೀಸರಿದ್ದರೂ ತಮ್ಮ ಸಹಾಯಕ್ಕೆ ಬರಲಿಲ್ಲವೆಂದು ಅವರು ಆಪಾದಿಸಿದ್ದಾರೆ.