ನೆಲ್ಯಾಡಿ: ಚಹಾ ಕುಡಿಯಲೆಂದು ಹೊಟೆಲ್ ಗೆ ತೆರಳಿ ಲಾರಿಯತ್ತ ಬರುತ್ತಿದ್ದ ಇಬ್ಬರು ಲಾರಿ ಚಾಲಕರಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದು ಚಾಲಕರು ಗಂಭೀರ ಗಾಯಗೊಂಡ ಘಟನೆ ನೆಲ್ಯಾಡಿ ಸಮೀಪದ ಕೋಲ್ಪೆಯಲ್ಲಿ ಜುಲೈ 8 ರಂದು ನಡೆದಿದೆ.
ಸಕಲೇಶಪುರ ಮೂಲದ ಲಾರಿ ಚಾಲಕರಾದ ವಿನಯ ಕುಮಾರ್ ಮತ್ತು ಮಂಜ ಎಂಬವರು ಗಂಭೀರ ಗಾಯಗೊಂಡವರು.ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು- ಮಂಗಳೂರು ನಡುವಿನ ನೆಲ್ಯಾಡಿ ಸಮೀಪದ ಕೋಲ್ಪೆಯಲ್ಲಿ ಈ ಅಪಘಾತ ನಡೆದಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ರಸ್ತೆ ಬದಿ ನಿಲ್ಲಿಸಿದ್ದ ಈಚರ್ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿ ನಿಂತಿದೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.