ವಿಟ್ಲ : ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆಯ ಕಳ್ಳತನ ಪ್ರಕರಣದ ತನಿಖೆ ಒಂದು ಹಂತಕ್ಕೆ ಬಂದಿದ್ದು ಸೋಮವಾರ ಮೂವರು ಆರೋಪಿಗಳ ಸ್ಥಳ ಮಹಜರು ಪ್ರಕ್ರಿಯೆ ಅಡ್ಯನಡ್ಕದ ಬ್ಯಾಂಕ್ ಶಾಖೆಯಲ್ಲಿ ಹಾಗೂ ಅಸುಪಾಸಿನಲ್ಲಿ ನಡೆದಿದೆ. ಸರಿ ಸುಮಾರು 12 ದಿನಗಳ ಕಾಲ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ ಪೊಲೀಸರು ಕೊನೆಗೂ ಭಾನುವಾರ ಆರೋಪಿಗಳ ಬಂಧನವನ್ನು ದಾಖಲೆಯಲ್ಲಿ ಅಧಿಕೃತವಾಗಿ ತೋರಿಸಿದ್ದಾರೆ .
ಫೆ 7ರ ತಡ ರಾತ್ರಿ ಶಿಥಿಲ ಸುರಕ್ಷತಾ ವ್ಯವಸ್ಥೆಯನ್ನು ಹೊಂದಿದ್ದ ಕರ್ನಾಟಕ ಬ್ಯಾಂಕಿನ ಅಡ್ಯನಡ್ಕ ಶಾಖೆಗೆ ನುಗ್ಗಿದ ಕಳ್ಳರು ಲಾಕರ್ ಬ್ರೇಕ್ ಮಾಡಿ ಕೋಟ್ಯಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದರು. ಆದರೇ ಕಳ್ಳತನವಾದ ನಗದು ಹಾಗೂ ನಗದ ಮೌಲ್ಯವನ್ನು ಗೌಪ್ಯವಾಗಿರಿಸಿ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬ್ಯಾಂಕಿನ ವೈಯುಕ್ತಿಕ ಲಾಕರ್ ನಲ್ಲಿ ಗ್ರಾಹಕರು ಇರಿಸಿದ್ದ ಚಿನ್ನ ಅಭರಣ ಹಾಗೂ ಬ್ಯಾಂಕ್ ನವರು ಚಿನ್ನ ಸಾಲ ನೀಡುವ ವೇಳೆ ಅಡಮಾನವಿರಿಸಿದ್ದ ಕೆಜಿಗಟ್ಟಲೇ ಚಿನ್ನ ಕಳವು ಆಗಿತ್ತು ಎಂಬ ಪುಕಾರು ಹಬ್ಬಿತ್ತು . ಕಳ್ಳತನ ನಡೆದು ತಿಂಗಳು ಕಳೆದರೂ ಪೊಲೀಸ್ ಇಲಾಖೆಯಾಗಲಿ ಬ್ಯಾಂಕ್ ಆಗಲಿ ಇದನ್ನು ಖಚಿತಪಡಿಸಿಲ್ಲ . ಹೀಗಾಗಿ ಕಳವಾದ ವಸ್ತುವಿನ ಮೌಲ್ಯ ಚಿದಂಬರ ರಹಸ್ಯವಾಗಿಯೇ ಉಳಿದಿದೆ.
ಕೇರಳ ರಾಜ್ಯದ ಕಾಸರಗೋಡಿನಿಂದ ಸಾರಡ್ಕ ಚೆಕ್ ಪೋಸ್ಟ್ ಮೂಲಕ ಬ್ರಿಝಾ ಕಾರಿನಲ್ಲಿ ಬಂದ ಆರೋಪಿಗಳು ಬ್ಯಾಂಕಿನ ಹಿಬ್ಬಂದಿಯ ಕಿಟಕಿಯ ಸರಳುಗಳನ್ನು ಮುರಿದು ಒಳ ನುಗ್ಗಿ ಲಾಕರ್ ಬ್ರೇಕ್ ಮಾಡಿ, ಅದೇ ಮಾರ್ಗದಲ್ಲಿ ಸಲೀಸಾಗಿ ಪರಾರಿಯಾಗಿದ್ದರು. ಅಂತರಾಜ್ಯ ಹೆದ್ದಾರಿಯ ಅಂಚಿನಲ್ಲಿ, ಚೆಕ್ ಫೋಸ್ಟಿಗಿಂತ ಒಂದು ಕಿಮೀ ದೂರದಲ್ಲಿ ಕಳ್ಳತನ ನಡೆದರೂ ಪೊಲೀಸರಿಗೆ ಸ್ಥಳೀಯವಾಗಿ ಪ್ರಕರಣ ಭೇದಿಸಲು ಸರಿಯಾದ ಕುರುಹು ಸಿಕ್ಕಿರಲಿಲ್ಲ. ಪೆರ್ಲದಲ್ಲಿ ಕೇರಳ ಸರಕಾರ ಅಳವಡಿಸಿದ ‘ಹೈ ಡೆಫಿನೆಷನ್’ ಸಿಸಿಟಿವಿ ಕ್ಯಾಮಾರದಲ್ಲಿ ಬ್ರಿಝಾ ಕಾರಿನ ಫೋಟೊ ಕಂಡು ಬಂದಿದ್ದು ಇದರ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದರು.
ಕೆಜಿಗಟ್ಟಲೇ ಚಿನ್ನ ಪತ್ತೆಯಾಗಿದೆ ಎಂದು ಕೇರಳದ ಪ್ರತಿಷ್ಠಿತ ಮಾಧ್ಯಮಗಳು ವರದಿ ಪ್ರಕಟಿಸಿವೆ. ನಿಜಕ್ಕೂ ಎಷ್ಟು ಚಿನ್ನಾಭರಣ ಕಳವಾಗಿದೆ, ಅದರಲ್ಲಿ ಎಷ್ಟು ಪತ್ತೆಯಾಗಿದೆ ಮತ್ತು ಅದರಲ್ಲಿ ಎಷ್ಟು ಪೊಲೀಸ್ ದಾಖಲಾತಿಯಲ್ಲಿ ತೋರಿಸಲಾಗುತ್ತದೆ ಎನ್ನುವುದು ಸದ್ಯ ಸಾರ್ವಜನಿಕ ವಲಯದಲ್ಲಿರುವ ಕುತೂಹಲ.
ಕಾಸರಗೋಡು ಮೂಲದ ಖಲಂದರ್, ರಫೀಕ್, ಬಾಯಾರು ಮೂಲದ ದಯಾನಂದ ಕಳ್ಳತನದ ಪ್ರಮುಖ ರೂವಾರಿಗಳು ಎನ್ನಲಾಗಿದೆ. ಈ ಮೂವರನ್ನು ಸೋಮವಾರ ಸ್ಥಳ ಮಹಜರಿಗೆ ಅಡ್ಯನಡ್ಕಕ್ಕೆ ಪೊಲೀಸರು ಕರೆದುಕೊಂಡು ಬಂದಿದ್ದರು. ಬಂಧಿಸಿದ ಪ್ರಮುಖ ಆರೋಪಿಗಳಲ್ಲಿ ರಫೀಕ್ ಯಾನೆ ಈತನ ಮೇಲೆ ದರೋಡೆ, ಕಳ್ಳತನದ ಹಲವಾರು ಪ್ರಕರಣಗಳಿವೆ. ಖಲಂದರ್ ಎಂಬಾತನ ಮೇಲೆ ಕಣ್ಣೂರು, ಪುತ್ತೂರು, ವಿಟ್ಲ, ಸಂಪ್ಯ ಠಾಣೆಗಳಲ್ಲಿ ಈ ಹಿಂದೆ ಅನೇಕ ಕಳ್ಳತನ ಪ್ರಕರಣಗಳಿವೆ ಬಾಯಾರು ನಿವಾಸಿ ದಯಾನಂದ ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ಈತ ಇದೇ ಮೊದಲ ಬಾರಿ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದು, ಬ್ಯಾಂಕಿನ ಸ್ಟ್ರಾಂಗ್ ರೂಮಿನ ಭಾರಿ ಭದ್ರತೆಯ ಕಬ್ಬಿಣದ ಬಾಗಿಲನ್ನು ಗ್ಯಾಸ್ ಕಟ್ಟರ್ ಮೂಲಕ ತುಂಡರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ.