ಬೆಂಗಳೂರು; ಕೇಂದ್ರ ಸಾಂಸ್ಥಿಕ ವ್ಯವಹಾರಗಳ ವ್ಯಾಪ್ತಿಗೆ ಒಳಪಡುವ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾ – ಬೆಂಗಳೂರು ಚಾಪ್ಟರ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ನಡುವೆ ಶಿಕ್ಷಣದಲ್ಲಿ ಸಹಭಾಗಿತ್ವ ಹೊಂದಲು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಹಕಾರ ಪ್ರಾರಂಭವಾಗಲಿವೆ ಎಂದು ಐಸಿಎಸ್ಐ ನೂತನ ರಾಷ್ಟ್ರೀಯ ಅಧ್ಯಕ್ಷ ಸಿ.ಎಸ್. ಧನಂಜಯ್ ಶುಕ್ಲಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ಅಕ್ಟೋಬರ್ ನಲ್ಲಿ ಬೆಂಗಳೂರು ವಿವಿ ಜೊತೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಇಂದು ಕುಲಸಚಿವರಾದ ಶೇಕ್ ಲತೀಫ್, ವಿವಿ ಡೀನ್ ಗಳ ಜೊತೆ ಶೈಕ್ಷಣಿಕವಾಗಿ ಪರಸ್ಪರ ಸಹಕಾರ, ಪಠ್ಯವನ್ನು ಮೇಲ್ದರ್ಜೆಗೇರಿಸುವ, ಕೈಗಾರಿಕಾ ಪಾಲುದಾರಿಕೆ ಹೊಂದುವ ಕುರಿತಂತೆ ವಿಸ್ತೃತ ಫಲಪ್ರದ ಮಾತುಕತೆ ನಡೆಸಲಾಗಿದೆ. ಇದರಿಂದ ಬೆಂಗಳೂರು ವಿವಿ ವ್ಯಾಪ್ತಿಯ 298 ಕಾಲೇಜುಗಳು ಮತ್ತು ಐಸಿಎಸ್ಐಗೆ ಅನುಕೂಲವಾಗಲಿದೆ. ಪಾಲುದಾರಿಕೆಯ ಸ್ವರೂಪದ ಬಗ್ಗೆ ಸಮಾಲೋಚಿಸಿದ್ದು, ಶೈಕ್ಷಣಿಕ ವಲಯದಲ್ಲಿ ಹೊಸ ಆಯಾಮಕ್ಕೆ ಇದೀಗ ವೇದಿಕೆ ಸಜ್ಜಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಒಟ್ಟು 12,170 ಮಂದಿ ವಿದ್ಯಾರ್ಥಿಗಳು ಕಂಪೆನಿ ಸೆಕ್ರೇಟರಿ ಕೋರ್ಸ್ ಗಳನ್ನು ಅಧ್ಯಯನ ಮಾಡುತ್ತಿದ್ದು, ಬೆಂಗಳೂರಿನ ಭಾರತೀಯ ಆಡಳಿತ ಮಂಡಳಿ – ಐಐಎಂ, ಕ್ರೈಸ್ಟ್ ವಿವಿ ಜೊತೆಯೂ ಐಸಿಎಸ್ಐ ಸಹಭಾಗಿತ್ವ ಹೊಂದಿದೆ. ಸಿಎಸ್ಆರ್ ಚಟುವಟಿಕೆಯಡಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾದ ಸೈನಿಕರ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದು, 2017 ರಿಂದ ಇದಕ್ಕಾಗಿ 41 ಲಕ್ಷ ರೂಪಾಯಿ ನಿಧಿ ಸಂಗ್ರಹಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ವಿಶೇಷ ಚೇತನರಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದೆ. ಸಿಎಸ್ ಕೋರ್ಸ್ ಗಳಿಗೆ ವ್ಯಾಪಕ ಬೇಡಿಕೆ ಇದ್ದು, ಬರುವ 2030 ರ ವೇಳೆಗೆ 30 ಸಾವಿರ ಹೆಚ್ಚುವರಿ ಹುದ್ದೆಗಳು ಸೃಜನೆಯಾಗಲಿವೆ. ವಿಜ್ಞಾನ ಒಲಿಂಪಿಯಾಡ್ ಪ್ರತಿಷ್ಠಾನದೊಂದಿಗೆ ಐಸಿಎಸ್ಐ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದೆ ಎಂದು ಸಿ.ಎಸ್. ಧನಂಜಯ್ ಶುಕ್ಲಾ ಹೇಳಿದರು.
ಐಸಿಎಸ್ಐ ಉಪಾಧ್ಯಕ್ಷ ಪವನ್ ಜಿ ಚಂದಕ್ ಮಾತನಾಡಿ, ಕಾರ್ಫೋರೆಟ್ ಜಗತ್ತಿಗೆ ಸಂವಹನ ಕೌಶಲ್ಯ ಅಗತ್ಯವಾಗಿದ್ದು, ಯೋಚಿಸಿ ಮಾತನಾಡುವ ಕುಶಲತೆಯನ್ನು ವೃದ್ಧಿಸಲು “ಸಮಾಜದೊಂದಿಗೆ ಚರ್ಚೆ” ಕಾರ್ಯಕ್ರಮವನ್ನು ಪರಿಚಯಿಸಲಾಗುತ್ತಿದೆ. ಸಾಮಾಜಿಕ ಆಡಳಿತ ಲೆಕ್ಕ ಪರಿಶೋಧನೆ, ಇ – ಕಲಿಕೆಯಲ್ಲಿ ಕ್ರಾಂತಿಕಾರ ಕ್ರಮಗಳನ್ನು ಅಳವಡಿಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರೀಯ ಮಂಡಳಿ ಸದಸ್ಯರಾದ ಸಿ. ದ್ವಾರಕಾನಾಥ್ ಮಾನತಾಡಿ, ಸಿಎಸ್ ಕೋರ್ಸ್ ಗಳನ್ನು ಪೂರ್ಣಗೊಳಿಸಿದವರು 24 ತಿಂಗಳು ಕಠಿಣ ತರಬೇತಿ ಪಡೆಯಬೇಕಾಗುತ್ತದೆ. ಇದರಿಂದ ಪ್ರಾಯೋಗಿಕವಾಗಿ ಕೆಲಸದ ಅನುಭವ ಪಡೆಯಲು ಸಹಕಾರಿಯಾಗಲಿದೆ. ತರಬೇತಿ ಪಡೆಯುವವರಿಗೆ ಗರಿಷ್ಠ 10 ಸಾವಿರ ರೂಪಾಯಿ ಶಿಷ್ಯ ವೇತನ ನೀಡಲಾಗುತ್ತದೆ ಎಂದು ಹೇಳಿದರು.
ಎಸ್ಐಆರ್ ಸಿ ಮಾಜಿ ಅಧ್ಯಕ್ಷರಾದ ಪ್ರದೀಪ್ ಬಿ ಕುಲಕರ್ಣಿ ಮಾತನಾಡಿ, ಕಂಪೆನಿ ಸೆಕ್ರೇಟರೀಸ್ ಕೋರ್ಸ್ ಗಳಿಗೆ ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಪ್ರಾಧಿಕಾರ ಮತ್ತು ಸೆಬಿ ಕೂಡ ಮಾನ್ಯತೆ ನೀಡಿದ್ದು, ಕಾರ್ಪೋರೇಟ್ ವಲಯದಲ್ಲಿ ಈ ಕೋರ್ಸ್ ಗಳು ಹೊಸ ಸ್ವರೂಪ ಪಡೆದುಕೊಂಡಿವೆ. ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಬೆಂಗಳೂರಿನ ಮೂರು ಮಂದಿ ಅಗ್ರ ಶ್ರೇಯಾಂಕದಲ್ಲಿ ಉತ್ತೀರ್ಣರಾಗಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಐಸಿಎಸ್ಐ ಬೆಂಗಳೂರು ಚಾಪ್ಟರ್ ಅಧ್ಯಕ್ಷರಾದ ಸಿ.ಎಸ್. ದೇವಿಕಾ ಸತ್ಯನಾರಾಯಣ್ ಮಾತನಾಡಿ, ಐಸಿಎಸ್ಐ ಜೊತೆ ಬೆಂಗಳೂರು ವಿವಿ ಒಪ್ಪಂದ ಮಾಡಿಕೊಂಡಿರುವುದರಿಂದ ಶೈಕ್ಷಣಿಕ ಚಟುವಟಿಕೆಗೆ ಜಾಗತಿಕ ಮನ್ನಣೆ ದೊರೆಯಲಿದೆ. ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಇದು ಬುನಾದಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಐಸಿಎಸ್ಐ ಬೆಂಗಳೂರು ಚಾಪ್ಟರ್ ಕಾರ್ಯದರ್ಶಿ ಸಿಎಸ್ ಪ್ರಸನ್ನ ಬೇಡಿ ಉಪಸ್ಥಿತರಿದ್ದರು.
%%
ಬೆಂಗಳೂರು, ಮಾ, 1; ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಸಾಧ್ಯವಿಲ್ಲ ಎಂದಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ಕರ್ನಾಟಕ ಬಂದ್‌ಗೆ ಕರೆ ನೀಡಿರುವ ದಿನವೂ ಎಂದಿನಂತೆ ಪರೀಕ್ಷೆಗಳು ನಡೆಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಯೋಮಿತಿ ಸಡಿಲಿಕೆ ವಿಚಾರದಲ್ಲಿ ಮಕ್ಕಳ ಪರವಾಗಿ ನನ್ನ ಬೆಂಬಲವೂ ಇದೆ, ಆದರೆ ಕಾನೂನಿಗೆ ವಿರುದ್ಧವಾಗಿ ಸರ್ಕಾರ ಹೋಗಲು ಸಾಧ್ಯವಿಲ್ಲ. ಒಂದನೇ ತರಗತಿ ಪ್ರವೇಶ ವಯೋಮಿತಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ತೀರ್ಪು ನೀಡಿವೆ, ಇನ್ನು ಕೆಲವು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ, ನ್ಯಾಯಾಲಯ ತೀರ್ಪು ನೀಡುವವರೆಗೂ ನಾವು ನಿಸ್ಸಹಾಯಕರು ಎಂದರು.
ಕೆಲವು ಪೋಷಕರು, ಒಂದನೇ ತರಗತಿ ಪ್ರವೇಶಕ್ಕೆ ತಮ್ಮ ಮಕ್ಕಳ ವಯೋಮಿತಿ ಏಳು ದಿನ ಕಡಿಮೆ ಇದೆ ಎನ್ನುತ್ತಾರೆ, ಇನ್ನು ಕೆಲವರು ಎರಡು-ಮೂರು ತಿಂಗಳು ಎನ್ನುತ್ತಾರೆ, ಅವರ ಸಂಕಷ್ಟ ನನಗೆ ಅರ್ಥವಾಗುತ್ತದೆ. ಪ್ರಸಕ್ತ ಸಾಲಿಗೆ ಪ್ರವೇಶಾವಕಾಶ ತಪ್ಪಿದರೆ ಮಕ್ಕಳ ಒಂದು ವರ್ಷ ವ್ಯರ್ಥವಾಗುತ್ತದೆ ಎಂದೆಲ್ಲಾ ಅಳಲು ತೋಡಿಕೊಳ್ಳುತ್ತಿದ್ದಾರೆ, ಆದರೆ, ಒಂದು ದಿನ ಕಡಿಮೆಯಾದರೂ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದರು.
ಕರ್ನಾಟಕ ಬಂದ್ ದಿನದಂದು 7, 8, 9ನೇ ತರಗತಿ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ, ಕನ್ನಡ ಸಂಘಟನೆಗಳು ಕರೆದಿರುವ ಬಂದ್ ಹಿನ್ನೆಲೆಯಲ್ಲಿ ನಾವು ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಿಲ್ಲ. ಮಕ್ಕಳು ಪರೀಕ್ಷೆ ಬರೆಯಲು ಹೋಗುತ್ತಾರೆ ಎಂದರೆ, ಬಂದ್ ಕರೆ ನೀಡಿರುವವರೂ ಅಡ್ಡಿಪಡಿಸಲಾರರು, ಬೇಕಿದ್ದರೆ, ಬಂದ್ ಕರೆ ನೀಡಿರುವ ಪ್ರಾಯೋಜಕರೇ ಬಂದ್ ದಿನವನ್ನು ಬದಲಿಸಿಕೊಳ್ಳಲಿ ಎಂದರು.
%%
ಬೆಂಗಳೂರು, ಮಾ, 1; ಸಂಖ್ಯಾಬಲದ ಆಧಾರದ ಮೇಲೆ ಆಡಳಿತಾರೂಢ ಕಾಂಗ್ರೆಸ್ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ನೋಟಿಸ್ ನೀಡಿದರೆ, ತಕ್ಷಣವೇ ಸ್ಥಾನ ತ್ಯಜಿಸುವುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತದಲ್ಲಿರುವ ಕಾಂಗ್ರೆಸ್‌ಗೆ ಪರಿಷತ್‌ನಲ್ಲಿ ಈಗ ಬಹುಮತವಿದೆ. ಇಂತಹ ಸನ್ನಿವೇಶದಲ್ಲಿ ತಮ್ಮನ್ನು ಮತ್ತು ಉಪಸಭಾಪತಿ ಸ್ಥಾನದಿಂದ ಎಂ.ಕೆ.ಪ್ರಾಣೇಶ್ ಅವರನ್ನು ಕೆಳಗಿಳಿಸಲು ನೋಟಿಸ್ ನೀಡಿದರೆ, ನಾವು ಸ್ಥಾನ ತೊರೆಯಲು ಸಿದ್ಧ ಎಂದರು.
ಬಿಜೆಪಿ ಆಡಳಿತದಲ್ಲಿ ತಮ್ಮನ್ನು ಸಭಾಪತಿಯನ್ನಾಗಿ ಆಯ್ಕೆ ಮಾಡಲಾಗಿತ್ತು, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಈಗ ಕಾಂಗ್ರೆಸ್‌ಗೆ ಪರಿಷತ್‌ನಲ್ಲಿ ಬಹುಮತವಿದೆ. ಮಾರ್ಚ್ 3ರಿಂದ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಜನರ ಸಮಸ್ಯೆಗಳಿಗೆ ಒತ್ತು ಕೊಟ್ಟು ಚರ್ಚಿಸುವ ಅವಶ್ಯಕತೆ ಇದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಅನೇಕ ಜ್ವಲಂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚೆಗೆ ಈಗಾಗಲೇ ಸದಸ್ಯರು ನೋಟಿಸ್ ನೀಡಿದ್ದಾರೆ, ಇಂತಹ ವಿಷಯಗಳು ಸದನದಲ್ಲಿ ಚರ್ಚೆಯಾದರೆ, ಸರ್ಕಾರದ ಕಣ್ಣು ತೆರೆಸಿ ಪರಿಹಾರ ಕಂಡುಕೊಳ್ಳಲು ದಾರಿಯಾಗಲಿದೆ ಎಂದರು.
$$
ಬೆಂಗಳೂರು, ಮಾ, 1; ಬೆಂಗಳೂರಿನಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್-ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಪುನರಾರಂಭಿಸುವ ಕುರಿತು ಚರ್ಚಿಸಲು ಮುಂದಿನ ವಾರ ಸಭೆ ಕರೆಯಲಾಗುವುದು ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಈ ತಿಂಗಳ ಎರಡನೇ ವಾರದಲ್ಲಿ ನಾಗರಿಕ ವಿಮಾನಯಾನ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಎಚ್‌ಎಎಲ್‌ನ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಹಳೆಯ ವಿಮಾನ ನಿಲ್ದಾಣ ಪುನರಾರಂಭಿಸುವುದರಿಂದ ಬೆಂಗಳೂರಿಗೆ ಹಲವು ರೀತಿಯಲ್ಲಿ ಸಹಾಯಕವಾಗಲಿದೆ. ನಗರದ ಹೃದಯ ಭಾಗದಲ್ಲಿ ವಾಣಿಜ್ಯ ವಿಮಾನ ನಿಲ್ದಾಣದ ಸೌಲಭ್ಯ ಕಲ್ಪಿಸಲಿದೆ. ಬಿಐಎಎಲ್‌ನ ಸಾಮರ್ಥ್ಯ ಹೆಚ್ಚಿಸಲಿದೆ. ಜೊತೆಗೆ ಎಚ್‌ಎಎಲ್‌ಗೆ ಆದಾಯ ಹರಿದು ಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
<><><><>
ಬೆಂಗಳೂರು, ಮಾ, 1; ಕನ್ನಡಿಗರು ಮತ್ತು ಮರಾಠಿಗರ ನಡುವೆ ಭಾಷಾವಾರು ವಿಚಾರದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಶಾಂತಿಯುತವಾಗಿ ಬಗೆಹರಿಸಲು ಸರ್ಕಾರ ಮುಂದಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಯಾವುದೇ ಭಾಷೆ ಆಧಾರದ ಮೇಲೆ ಯಾರನ್ನು ದ್ವೇಷ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕನ್ನಡಿಗರು ಮರಾಠಿಗರನ್ನು ದ್ವೇಷ ಮಾಡೋದು, ಮರಾಠಿಗರು ಕನ್ನಡಿಗರನ್ನು ದ್ವೇಷ ಮಾಡುವ ಪ್ರಕ್ರಿಯೆ ಕೆಲವರಿಂದ ನಡೆದಿದ್ದು, ಇದಕ್ಕೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದ್ದಾರೆ.
$$
ಹಕ್ಕಿ ಜ್ವರ ಭೀತಿ: ರಾಜ್ಯದ ಗಡಿ ಪ್ರದೇಶಗಳಲ್ಲಿ ಕೋಳಿ ಉತ್ಪನ್ನಗಳ ಸಾಗಾಣಿಕೆಗೆ ನಿಷೇಧ!
ಬೆಂಗಳೂರು, ಮಾ,1: ಹಕ್ಕಿ ಜ್ವರ ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಪ್ರದೇಶಗಳಲ್ಲಿ ಕೋಳಿ ಉತ್ಪನ್ನಗಳ ಸಾಗಾಣಿಕೆಗೆ ನಿಷೇಧ ಹೇರಲಾಗಿದೆ.
ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ವ್ಯಾಪ್ತಿಯಲ್ಲಿರುವ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕುರೇಕುಪ್ಪ ಗ್ರಾಮದ ಕೋಳಿ ಫಾರ್ಮ್ನಲ್ಲಿ ನಿತ್ಯ ಸಾವಿರಾರು ಕೋಳಿಗಳು ಇರುತ್ತಿದ್ದವು. ಆದರೆ ಈಗ ಹಕ್ಕಿ ಜ್ವರದ ಅಟ್ಟಹಾಸಕ್ಕೆ ಇಡೀ ಕೋಳಿ ಫಾರ್ಮ್ ಬಣಗುಡುತ್ತಿದೆ.
ಫೆಬ್ರವರಿ 21ರಿಂದ ಪೌಲ್ಟ್ರಿ ಫಾರ್ಮ್ನಲ್ಲಿ ಕೋಳಿಗಳು ಹಂತಹಂತವಾಗಿ ಮೃತಪಡುತ್ತಿದ್ದವು. ಅನುಮಾನ ಬಂದ ಅಧಿಕಾರಿಗಳು ಸತ್ತ ಕೋಳಿಗಳನ್ನು ಪ್ರಯೋಗಾಲಕ್ಕೆ ಕಳುಹಿಸಿದ್ದರು. ಪ್ರಯೋಗಾಲಯ ವರದಿಯಲ್ಲಿ, ಹಕ್ಕಿ ಜ್ವರ ದೃಢಪಟ್ಟಿತ್ತು. ಇದೊಂದೇ ಫಾರ್ಮ್ನಲ್ಲಿ ಈವರೆಗೆ 2,400 ಕೋಳಿಗಳು ಹಕ್ಕಿಜ್ವರಕ್ಕೆ ತುತ್ತಾಗಿವೆ. ಈ ಪೈಕಿ ಅಧಿಕಾರಿಗಳೇ 1,020 ಕೋಳಿಗಳ ವಧೆ ಮಾಡಿ ಹೂತು ಹಾಕಿದ್ದಾರೆ.
ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಹಕ್ಕಿ ಜ್ವರ ಹಬ್ಬಿರುವ ಶಂಕೆ ಶುರುವಾಗಿದೆ. ಅಧಿಕಾರಿಗಳು ಗ್ರಾಮದ ಸುತ್ತ 1 ಕಿ.ಮೀ ಅಪಾಯಕಾರಿ ವಲಯ ಎಂದು ಗುರುತು ಮಾಡಿದ್ದಾರೆ. ಕೋಳಿ ಫಾರ್ಮ್ ಸುತ್ತ ಸ್ಪ್ರೇ, ಪೌಡರ್ ಸಿಂಪಡಣೆ ಮಾಡಲಾಗಿದೆ.
ಶುಕ್ರವಾರ ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ ದೃಢಪಟ್ಟಿತ್ತು. ವರದಹಳ್ಳಿ ಎಂಬ ಗ್ರಾಮದಲ್ಲಿ 45 ಕೋಳಿಗಳು ಮೃತಪಟ್ಟಿದ್ದವು. ಈ ಬೆನ್ನಲ್ಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಲರ್ಟ್ ಆಗಿದೆ. ಇಲಾಖೆಯ ಸಿಬ್ಬಂದಿ ಮನೆಮನೆಗೆ ತೆರಳಿ ಸಮೀಕ್ಷೆ ಮಾಡುತ್ತಿದ್ದಾರೆ. ಹಕ್ಕಿಜ್ವರ ಮನುಷ್ಯರಿಗೆ ಹರಡಿದೆಯೇ? ಎಂಬ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಹೀಗಾಗಿಯೇ ರಾಜ್ಯಾದ್ಯಂತ ಕೋಳಿ ಮೊಟ್ಟೆ ದರ ಕುಸಿತ ಕಂಡಿದೆ. ಜೊತೆಗೆ ಕೋಳಿ ಮಾಂಸ ತಿನ್ನಲು ಜನರು ಹಿಂಜರಿಯುತ್ತಿದ್ದಾರೆ.
ರಾಜ್ಯದ ವಿವಿಧೆಡೆ ಹಕ್ಕಿಜ್ವರದ ಭೀತಿ ಎದುರಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕುರೇಕುಪ್ಪ ಜಾನುವಾರು ಸಂವರ್ಧನೆ ಮತ್ತು ತರಬೇತಿ ಕೇಂದ್ರದಲ್ಲಿ ಕೆಲ ದಿನಗಳ ಹಿಂದೆ ‘ಹಕ್ಕಿಜ್ವರ’ ದಿಂದ ಎರಡು ಸಾವಿರ ಕೋಳಿಗಳು ಸಾವನ್ನಪ್ಪಿದೆ. ಈ ಫಾರಂನಲ್ಲಿ ವಿವಿಧ ತಳಿಯ ಕೋಳಿಗಳನ್ನು ಅಭಿವೃದ್ಧಿ ಪಡಿಸಿ ರೈತರಿಗೆ ವಿತರಿಸುವ ಸಲುವಾಗಿ ಅಸೀಲ್ ತಳಿಯ ಕೋಳಿಗಳನ್ನು ಸಾಕಲಾಗಿತ್ತು. ಈ ಕೋಳಿಗಳು ಕಳೆದ ೧೨ ದಿನಗಳಿಂದ ಸಾವನ್ನಪ್ಪುತ್ತಿದ್ದ ಪರಿಣಾಮ ಕೋಳಿಗಳ ಸ್ಯಾಂಪಲ್‌ನ್ನು ಭೋಪಾಲ್‌ನಲ್ಲಿನ ಲ್ಯಾಬ್‌ನಲ್ಲಿ ಪರಿಶೀಲಿಸಿದಾಗ ಕೋಳಿಗಳಲ್ಲಿ ಹಕ್ಕಿಜ್ವರ ಇರುವುದು ದೃಢಪಟ್ಟಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆಂದು ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ವಿನೋದ್ ಕುಮಾರ್ ಹೇಳಿದ್ದಾರೆ.
ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರದ ಸುತ್ತಲೂ ೧ ಕಿಲೋಮೀಟರ್ ವ್ಯಾಪ್ತಿಯನ್ನು ಸೋಂಕಿತ ಪ್ರದೇಶ, ೧೦ ಕಿಲೋಮೀಟರ್ ವ್ಯಾಪ್ತಿ ಪ್ರದೇಶವನ್ನು ಸರ್ವೆಲೆನ್ಸ್ ವಲಯ ಎಂದು ಗುರುತಿಸಲಾಗಿದೆ. ಈ ವಲಯದಲ್ಲಿ ಕೋಳಿ ಮಾಂಸ, ಮೊಟ್ಟೆಯನ್ನು ಮಾರುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು ೩೮೩ ರೈತರು ಸುಮಾರು ೯೫ ಲಕ್ಷ ಕೋಳಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಕೋಳಿ ಸಾಕಾಣಿಕೆ ಕೇಂದ್ರಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್ ಅನುರಾಧ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಯಾವುದೇ ಪಕ್ಷಿಗಳು ಅಥವಾ ಕೋಳಿಗಳು ಅನುಮಾನಾಸ್ಪದವಾಗಿ, ಅಸಹಜವಾಗಿ ಇಲ್ಲವೇ ಇದ್ದಕ್ಕಿದ್ದಂತೆ ಸಾವುಗಳು ಕಂಡು ಬಂದಲ್ಲಿ