Tuesday, March 18, 2025
Homeತುಳುನಾಡುಧರ್ಮಸ್ಥಳದಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ: ರಜತ ಮಹೋತ್ಸವ ಉದ್ಘಾಟನೆ

ಧರ್ಮಸ್ಥಳದಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ: ರಜತ ಮಹೋತ್ಸವ ಉದ್ಘಾಟನೆ


ಉಜಿರೆ: ಮಹಿಳೆಯರು ಬುದ್ಧಿವಂತರಾಗಿದ್ದು, ಸದಾ ಜಾಗೃತರಾಗಿರುತ್ತಾರೆ. ಅವರಲ್ಲಿ ಅದ್ಭುತ ಶಕ್ತಿ ಇದೆ. ಆದುದರಿಂದಲೆ ಇಂದು ಅವರು ತಮಗೆ ಸಿಗುವ ಎಲ್ಲಾ ಅವಕಾಶ, ಸೌಲಭ್ಯಗಳ ಸದುಪಯೋಗ ಪಡೆದು ಸ್ವಾವಲಂಬಿಗಳಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಗುರುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಪುರುಷರಿಂದ ಆಶ್ರಯ ಬೇಕಾಗಿಲ್ಲ. ಸದಾ ಸಕಾಲಿಕ ಪ್ರೋತ್ಸಾಹ, ಪ್ರೇರಣೆ ಅಗತ್ಯವಾಗಿದೆ.
ಕುಟುಂಬ ಮತ್ತು ಸಮಾಜದ ಸುಗಮ ನಿರ್ವಹಣೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಬಾಲ್ಯದಿಂದಲೆ ಮಕ್ಕಳನ್ನು ತಿದ್ದಿ, ತೀಡಿ ಉತ್ತಮ ಸಂಸ್ಕಾರ ನೀಡಿ ಆದರ್ಶ ವ್ಯಕ್ತಿತ್ವ ರೂಪಿಸುವುದು ಮಾತೆಯರ ಕರ್ತವ್ಯವೂ, ಹೊಣೆಗಾರಿಕೆಯೂ ಆಗಿದೆ. ಆದುದರಿಂದಲೆ ಧರ್ಮಸ್ಥಳದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡುವಾಗ ಪೋಷಕರಿಗೂ ತಜ್ಞರಿಂದ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತದೆ ಎಂದು ಹೆಗ್ಗಡೆಯವರು ಹೇಳಿದರು.
ಎಲ್ಲಾ ಶಾಖೆಗಳ ಕಾರ್ಯ ನಿರ್ವಹಣೆಯನ್ನು ಏಕಸೂತ್ರದಲ್ಲಿ ಪೋಣಿಸಿ ಸಂದರ್ಭೋಚಿತವಾಗಿ ಮಾಹಿತಿ, ಮಾರ್ಗದರ್ಶನ ನೀಡುವುದು ಒಕ್ಕೂಟದ ಜವಾಬ್ದಾರಿಯಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ  ಸ್ವ-ಸಹಾಯ ಸಂಘಗಳಿಗೆ ಒಕ್ಕೂಟದ ನೇತೃತ್ವದಲ್ಲಿ ಸದಾ ಪ್ರೋತ್ಸಾಹ, ಮಾರ್ಗದರ್ಶನ ನೀಡಲಾಗುತ್ತದೆ ಎಂದರು. ಕಾಲಕ್ಕೆ ತಕ್ಕಂತೆ ಅವರವರ ಪ್ರಾಯಕ್ಕೆ ಅನುಗುಣವಾಗಿ ಮಾತೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜದ ಮುಂದಿನ ಸಭ್ಯ, ಸುಸಂಸ್ಕೃತ ನಾಗರಿಕರಾಗಿ ರೂಪಿಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ  ಸಾಧನೆಯನ್ನು ಹೆಗ್ಗಡೆಯವರು ಶ್ಲಾಘಿಸಿ ಎಲ್ಲಾ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಅಭಿನಂದಿಸಿದರು. ಹೇಮಾವತಿ ಹೆಗ್ಗಡೆಯವರು ಬರೆದ “ಗೆಳತಿ” ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಚಲನಚಿತ್ರ ನಟಿ ಪದ್ಮಜಾ ರಾವ್ ಮಾತನಾಡಿ ಧರ್ಮಸ್ಥಳದಲ್ಲಿ ತಮಗೆಲ್ಲ ದೊರೆತ ರಾಜಮರ್ಯಾದೆಯೊಂದಿಗೆ ಗೌರವಪೂರ್ವಕ ಆತಿಥ್ಯಕ್ಕೆ ಸಂತಸ ವ್ಯಕ್ತಪಡಿಸಿದರು. ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಸ್ವಾವಲಂಬಿಗಳಾದರೆ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿ ಬರುತ್ತದೆ. ಮಹಿಳಾ ಸಬಲೀಕರಣವೂ ಆಗುತ್ತದೆ ಎಂದರು.
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಸಂಚಿಕೆ ಬಿಡುಗಡೆಗೊಳಿಸಿದ ಮಕ್ಕಳ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷಿö್ಮ ಬಾಳೇಕುಂದ್ರಿ ಮಾತನಾಡಿ, ದಾನ ಚಿಂತಾಮಣಿ ಅತ್ತಿಮಬ್ಬೆ, ಉಳ್ಳಾಲದ ರಾಣಿ ಅಬ್ಬಕ್ಕ, ಮೊದಲಾದವರು ಮಹಿಳೆಯರಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ಮಹಿಳೆಯರು ಸದಾ ಮಾತನಾಡುವ ಮಾತೆಯರಾಗದೆ, ಚಿಂತೆಯನ್ನು ಬಿಟ್ಟು ಸದಾ ಚಿಂತನೆಯನ್ನು ಮಾಡುವ ಚಿಂತಾಮಣಿಗಳಾಗಬೇಕು. ಮಹಿಳೆಯರು ಸಮರ್ಪಣಾ ಮನೋಭಾವದಿಂದ ಆರೋಗ್ಯಪೂರ್ಣ, ಕುಟುಂಬ, ಸಮಾಜ ಮತ್ತು ರಾಷ್ಟçನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ನೀಡಬೇಕು. ಪಾಶ್ಚಾöತ್ಯ ಸಂಸ್ಕೃತಿಯ ಅಂಧಾನುಕರಣೆ ಸಲ್ಲದು ಎಂದು ಅವರು ಕಿವಿಮಾತು ಹೇಳಿದರು.


ಸಾಧಕರ ಸನ್ಮಾನ

ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ಬೆಳಗಾವಿಯ ಸುಮನ್ ಪತ್ರಾವಳಿ, ಮೂಡಬಿದ್ರೆಯ ವೀಣಾ ಶೆಟ್ಟಿ, ಬೆಂಗಳೂರಿನ ಸುಶೀಮಾ ಯಶವಂತ್, ಛಾಯಾಚಿತ್ರ ಗ್ರಾಹಕಿ ಹುಣಸೂರಿನ ಛಾಯಾ ಸುನಿಲ್ ಮತ್ತು ಮೈಸೂರಿನ ಕುಮಾರಿ ಅನನ್ಯ ಜೈನ್ ಅವರನ್ನು ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಗೌರವಾಧ್ಯಕ್ಷರಾದ ಹೇಮಾವತಿ ಹೆಗ್ಗಡೆ ಮಾತನಾಡಿ, ಜೈನಧರ್ಮದಲ್ಲಿ ತ್ಯಾಗ, ಅಹಿಂಸೆ ಮತ್ತು ವಿರಕ್ತಿಗೆ ಪ್ರಾಶಸ್ತ್ಯವಿದೆ. ಮಹಿಳೆಯರು ಕುಟುಂಬದ ಮತ್ತು ಸಮಾಜದ ಅವಿಭಾಜ್ಯ ಅಂಗವಾಗಿದ್ದು ಬಿಂದುವಾಗಿ ಮಾತ್ರವಲ್ಲದೆ ಸಿಂಧುವಾಗಿಯೂ ಎಲ್ಲರೊಂದಿಗೂ ಮುಕ್ತವಾಗಿ ಬೆರೆತು ನಿರಂತರ ಪ್ರಗತಿಗೆ ಸಹಕರಿಸಬೇಕು. ಮಹಿಳೆಯರಿಗೆ ಮಂದಿರಗಳು ಪಾಠಶಾಲೆಯಾದರೆ, ಸಮಾಜ ಪ್ರಯೋಗ ಶಾಲೆಯಾಗಬೇಕು. ಮಹಿಳೆಯರ ತ್ಯಾಗ, ಸೇವೆ, ಪ್ರೀತಿ-ವಿಶ್ವಾಸಕ್ಕೆ, ಸಮಾಜ ಸೇವೆಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಸೇವೆಯಿಂದ ಸಿಗುವ ತೃಪ್ತಿ, ಸಂತೋಷ ಮತ್ತು ನೆಮ್ಮದಿಯೇ ಮಹಿಳೆಯರಿಗೆ ದೊರಕುವ ನಿಜವಾದ ಪ್ರಶಸ್ತಿ ಎಂದು ಹೇಮಾವತಿ ಹೆಗ್ಗಡೆ ಅಭಿಪ್ರಾಯಪಟ್ಟರು. ಮಹಿಳೆಯರು ತಮ್ಮ ಮಕ್ಕಳನ್ನು ಉತ್ತಮ ಸಂಸ್ಕಾರವಂತರಾಗಿ ರೂಪಿಸಬೇಕು ಎಂದು ಅವರು ಹೇಳಿದರು.
ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಶ್ರದ್ಧಾಅಮಿತ್ ಉಪಸ್ಥಿತರಿದ್ದರು.
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಪದ್ಮಿನಿ ಪದ್ಮರಾಜ್ ಸ್ವಾಗತಿಸಿದರು. ಜಯಶ್ರೀ ಧನ್ಯವಾದವಿತ್ತರು.ಕುಮುದಾ ನಾಗಭೂಷಣ್ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES
- Advertisment -
Google search engine

Most Popular