ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಒಂದು ದಿನದ.ರಾಷ್ಟ್ರೀಯ ಮಟ್ಟದ ಪ್ರತಿಭಾ ಉತ್ಸವ‘ ಅಲೋಶಿಯಸ್ ಫೆಸ್ಟ್ 2024’ರ ಉದ್ಘಾಟನಾ ಸಮಾರಂಭವು ಎಲ್.ಸಿ.ಆರ್.ಐ ಸಭಾಂಗಣದಲ್ಲಿ ಶನಿವಾರ, ಆಗಸ್ಟ್ 31 ರಂದು ನಡೆಯಿತು.
ಕಾಲೇಜಿನ ಹಳೆ ವಿದ್ಯಾರ್ಥಿ, ಕೆಂಡಸಂಪಿಗೆ ಖ್ಯಾತಿಯ ನಟಿ ಮಾನ್ವಿತಾ ಕಾಮತ್, ಈ ಉತ್ಸವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಜೀವನದ ಪ್ರತಿಯೊಂದು ಹಂತದಲ್ಲಿ ನಾವು ಹೊಸ ವಿಷಯಗಳನ್ನು ಕಲಿಯುತ್ತಿರುತ್ತೇವೆ. ಇದು ಅವಕಾಶಗಳನ್ನು ನೀಡಿ, ಸವಾಲುಗಳನ್ನು ಎದುರಿಸಲು ಸಹಕರಿಸುತ್ತದೆ. ಯಶಸ್ಸು ಸಾಧಿಸಲು ಪರಿಶ್ರಮ ಮತ್ತು ಅದರೆಡೆಗಿನ ಒಲವು ಬಹುಮುಖ್ಯ ಪಾತ್ರ ವಹಿಸುತ್ತದೆ. ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದ ಗೌರವ ಅತಿಥಿ ಲೇಖಕಿ ಸೆರಾ ಫೆಲೆಕ್ಸ್ ಅವರು ಬರೆದ ‘ಎ ಕ್ರೈ ಹರ್ಡ್ ಅಸ್ ಎ ಸಾಂಗ್’ ಎನ್ನುವ
ಪುಸ್ತಕ ಈ ವೇಳೆ ಬಿಡುಗಡೆಗೊಳಿಸಲಾಯಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವರಿಷ್ಠಾಧಿಕಾರಿ ವಂ. ಮೆಲ್ವಿನ್ ಜೋಸೆಫ್ ಪಿಂಟೋರವರು ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧೆ ಎಂಬುವುದು ಅವಕಾಶ ಸೃಷ್ಟಿಸುವ ವೇದಿಕೆಯಂತೆ ನೋಡಬೇಕು. ಇತರರ ಗೆಲುವನ್ನು ಆನಂದಿಸಿ ಅವರಗೆ ಪ್ರೋತ್ಸಾಹಿಸಿ ಹುರಿದುಂಬಿಸಿದಾಗ, ಜೀವನದ ಸ್ಪರ್ಧೆಯಲ್ಲಿ ನಾವು ಗೆಲ್ಲಲು ಸಾಧ್ಯ ಎಂದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಹಳೆಯ ವಿದ್ಯಾರ್ಥಿ, ಉದ್ಯಮಿ ಕನ್ಯಾನ ಸದಾಶಿವ
ಶೆಟ್ಟಿಯವರು ಮಾತನಾಡಿ, ಯಾವುದೇ ಧ್ಯೇಯ-ಗುರಿ ಸಾಧನೆ ಸುಲಭದ ಕೆಲಸವಲ್ಲ. ಎಲ್ಲದಕ್ಕೂ ತಾಳ್ಮೆಯಿಂದ ಕಾದು ಫಲ ನಿರೀಕ್ಷಿಸಬೇಕು. ಇಂದಿನ ವಿದ್ಯಾರ್ಥಿಗಳು ತಾಳ್ಮೆ ಹಾಗೂ ಸತತ ಪ್ರಯಯ್ನವನ್ನು ಮಾಡಿದಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯದ ಕುಲಪತಿ ವಂ. ಡಾ. ಪ್ರವೀಣ್ ಮಾರ್ಟಿಸ್,
ಎಸ್.ಜೆ. ಅವರು ಮಾತನಾಡಿ, ನಾವೆಲ್ಲರೂ ಜೀವನದಲ್ಲಿ ಉತ್ಸಾಹಿಗಳಾಗಿರಬೇಕು. ಯಾವುದೇ ವಿಷಯದ ಮೇಲೇ
ಜ್ಞಾನ, ಆಸಕ್ತಿ, ಏಕಾಗ್ರತೆ ವಹಿಸಿ ಕಾರ್ಯನಿರ್ವಹಿಸಿದಾಗ ಅದರ ಫಲಿತಾಂಶ ನಮ್ಮಗೆ ಉತ್ತಮ ರೀತಿಯಲ್ಲಿ
ದೊರೆಯುತ್ತದೆ ಎಂದರು. ವೇದಿಕೆಯಲ್ಲಿ ಕುಲಸಚಿವರುಗಳಾದ ಡಾ. ಆಲ್ವಿನ್ ಡೆʼಸಾ., ಡಾ. ರೊನಾಲ್ಡ್ ನಝರತ್, ಬ್ಲಾಕ್ ನಿರ್ದೇಶಕರುಗಳಾದ ಡಾ. ಚಾರ್ಲ್ಸ್ ಫುಟಾರ್ಡೋ, ಡಾ. ಡೆನ್ನಿಸ್ ಫೆರ್ನಾಂಡಿಸ್, ಡಾ. ನಾರಾಯಣ್ ಭಟ್, ವಿವಿಧ ಉತ್ಸವ ಸಂಯೋಜಕರು, ಸಾಂಸ್ಕೃತಿಕ ಕಾರ್ಯದರ್ಶಿ ಅದ್ವಿಕಾ ಶೆಟ್ಟಿ ಹಾಗೂ ವಿದ್ಯಾರ್ಥಿ ಸಂಯೋಜಕರು ಉಪಸ್ಥಿತರಿದ್ದರು.
ಒಟ್ಟು 37 ಸ್ಪರ್ಧೆಗಳಲ್ಲಿ 50ಕ್ಕೂ ಹೆಚ್ಚಿನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಉತ್ಸವಗಳ ಉತ್ಸವ ಸ್ಪರ್ಧೆಯಲ್ಲಿ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು, ಮಂಗಳೂರು, ಪ್ರಥಮ ಸ್ಥಾನ ಗಳಿಸಿದರೆ, ಪದುವ ಪದವಿ ಪೂರ್ವ ಕಾಲೇಜು, ಮಂಗಳೂರು ಹಾಗೂ ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜು, ಉಜಿರೆ ದ್ವಿತೀಯ ಸ್ಥಾನವನ್ನು ಗಳಿಸಿತು.
ಸಾಂಸ್ಕೃತಿಕ ಉತ್ಸವ ಸ್ಪರ್ಧೆಯಲ್ಲಿ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು, ಮಂಗಳೂರು, ಪ್ರಥಮ ಸ್ಥಾನ ಗಳಿಸಿದರೆ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಹಾಗೂ ಕೆನರಾ ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನವನ್ನು ಗಳಿಸಿತು.
ಉದ್ಘಾಟನಾ ಸಮಾರಂಭದಲ್ಲಿ ಸಹ ಸಂಯೋಜಕಿ ಭವ್ಯಾ ಶೆಟ್ಟಿ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ವ್ಯಾನ್ಸ್
ವಂದಿಸಿದರು. ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಶೈನಾ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಸಂಯೋಜಕ ಡಾ. ರೆಜಿ ಜಾನ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ತೌಫಿರ ವಂದಿಸಿದರು. ವಿನಯ್ ಮಾಯ್ಕಾರ್ ಕಾರ್ಯಕ್ರಮ ನಿರೂಪಿಸಿದರು.