Monday, January 20, 2025
Homeಮೂಡುಬಿದಿರೆಆಳ್ವಾಸ್ ವಿರಾಸತ್: ಕೃಷಿ, ಆಹಾರ, ಫಲಪುಷ್ಪ, ಕರಕುಶಲ, ಪ್ರಾಚ್ಯವಸ್ತು, ಚಿತ್ರಕಲಾ, ಮಹಾಮೇಳಗಳಿಗೆ ಚಾಲನೆ

ಆಳ್ವಾಸ್ ವಿರಾಸತ್: ಕೃಷಿ, ಆಹಾರ, ಫಲಪುಷ್ಪ, ಕರಕುಶಲ, ಪ್ರಾಚ್ಯವಸ್ತು, ಚಿತ್ರಕಲಾ, ಮಹಾಮೇಳಗಳಿಗೆ ಚಾಲನೆ

‘ಯುವಜನತೆ ಕೃಷಿಯೆಡೆಗೆ ಸೆಳೆಯಲು ಮೇಳ ಪ್ರೇರಣೆ’
ಮೂಡುಬಿದಿರೆ
: ‘ಕರಾವಳಿಯ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ) ಯುವಜನತೆ ಕೃಷಿ ವಿಮುಖರಾಗುತ್ತಿದ್ದು, ಮಣ್ಣಿನೆಡೆಗೆ ಅವರನ್ನು ಸೆಳೆಯುವ ಇಂತಹ ಕಾರ್ಯಕ್ರಮಗಳು ಆದರ್ಶ ಮತ್ತು ಅನುಕರಣೀಯ’ ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ. ಜಗದೀಶ್ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಡಿ.11 ರಿಂದ ಡಿ. 15ರವರೆಗೆ ಆಯೋಜಿಸಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’30ನೇ ವರ್ಷದ ಆಳ್ವಾಸ್ ವಿರಾಸತ್’ ಅಂಗವಾಗಿ ಹಮ್ಮಿಕೊಂಡ   ಅನ್ವೇಷಣಾತ್ಮಕ ಶತಾಯುಷಿ ಕೃಷಿಕ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಕೃಷಿಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳಗಳ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.
ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುತ್ತಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತಿ ವರ್ಷ 500 ಎಕರೆ ಹಡಿಲು ಭೂಮಿಯನ್ನು ಭತ್ತದ ಗದ್ದೆಯಾಗಿ ಪರಿವರ್ತಿಸಲಾಗುತ್ತಿದೆ. ಗೇರು ಕೃಷಿಗೆ ಸಂಬಂಧಿಸಿದಂತೆ ವಿ.ವಿಯು ಸಂಪೂರ್ಣ ತಂತ್ರಜ್ಞಾನ ಹೊಂದಿದ್ದು, ಪ್ರತಿ ವರ್ಷ 3 ಲಕ್ಷ ಗೇರು ಸಸಿ ನೀಡಿ, ಬೆಳೆಗೆ ಪ್ರೊತ್ಸಾಹಿಸಲಾಗುತ್ತಿದೆ. ‘ಸಹ್ಯಾದ್ರಿ ಕೆಂಪು ಮುಕ್ತಿ’ ಹಾಗೂ ‘ಪಂಚಮಿ ಭತ್ತದ ತಳಿ’ ಇಲ್ಲಿನ ಹವಾಗುಣಕ್ಕೆ ಸೂಕ್ತವಾಗಿದ್ದು, ಬೆಳೆಯಿರಿ. ಒಳನಾಡಿನ ಮೀನುಗಾರಿಕೆಗೂ ಒತ್ತು ನೀಡಿ  ಎಂದರು.
ಭಾರತವು ಕೃಷಿ ಪ್ರಧಾನ ರಾಷ್ಟçವಾಗಿದ್ದು, ಶೇ 65ರಷ್ಟು ಜನರಿಗೆ ಉದ್ಯೋಗ, ದೇಶದ 140 ಕೋಟಿಗೂ ಅಧಿಕ ಜನಸಂಖ್ಯೆಗೆ ಆಹಾರ ನೀಡಿದೆ. ದೇಶದ ಶಾಂತಿ- ಸಹಬಾಳ್ವೆಗೆ ಕೃಷಿ ಕೊಡುಗೆ ಅಪಾರ. ಆಹಾರ ತಿನ್ನುವ ಮೊದಲು ರೈತರ ನೆನಪಿಸಿಕೊಳ್ಳಿ ಎಂದರು.
ದೇಶದಲ್ಲಿ ವಾರ್ಷಿಕ ಸುಮಾರು 250 ಕೋಟಿ ಮೆಟ್ರಿಕ್ ಟನ್‌ಗೂ ಅಧಿಕ ಆಹಾರದ ಬೇಡಿಕೆ ಇದೆ. ಈ ಪೈಕಿ ಸುಮಾರು 33 ಕೋಟಿ ಮೆಟ್ರಿಕ್ ಟನ್ ಆಹಾರ-ಧಾನ್ಯ, 35 ಕೋಟಿ ಮೆಟ್ರಿಕ್ ಟನ್, ತರಕಾರಿ 50 ಕೋಟಿ ಮೆಟ್ರಿಕ್ ಟನ್ ಹಾಲು ಹಾಗೂ ಉತ್ಪನ್ನಗಳು, 60 ಮೆಟ್ರಿಕ್ ಟನ್‌ಗೂ ಅಧಿಕ ಮಾಂಸ ಮತ್ತಿತರ ಆಹಾರ ಇದೆ ಎಂದರು.
ವಿದ್ಯಾರ್ಥಿಗಳಲ್ಲಿ ಬುದ್ಧಿಮತ್ತೆ ಹೆಚ್ಚಲು ಪೌಷ್ಟಿಕ ಆಹಾರ ಸೇವನೆಯೂ ಅವಶ್ಯ. ಎಲ್ಲ ಮಕ್ಕಳು ಒಂದೇ ರೀತಿ ಇರುವುದಿಲ್ಲ. ಪ್ರತಿಯೊಬ್ಬರಿಗೂ ಅನನ್ಯ ಸಾಮರ್ಥ್ಯ ಇದ್ದು, ವೃದ್ಧಿಗೆ ಗಮನ ಹರಿಸಿ. ನಮ್ಮದು ಯುವ ದೇಶವಾಗಿದ್ದು, ಅವರ ಅವರ ಅಗತ್ಯ ಮೂಲಸೌಲಭ್ಯಗಳನ್ನು ಕಲಿಸಬೇಕಾಗಿದೆ ಎಂದರು.  
ಸ್ಕೌಟ್ಸ್ ಮತ್ತು ಗೈಡ್ಸ್ -ರೋವರ್ಸ್ ರೇಂಜರ್ಸ್ ಸಾಂಸ್ಕೃತಿಕ ಶಿಬಿರ, ಕರಕುಶಲ ಮೇಳ, ಆಹಾರ ಮೇಳವನ್ನು ಉದ್ಘಾಟಿಸಿದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಅಯುಕ್ತ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಕನ್ನಡ, ಕ್ರೀಡೆ, ಸಂಸ್ಕೃತಿ, ಶಿಸ್ತು ಮತ್ತಿತರ ವಿಚಾರಗಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸಿಗುವ ಪ್ರೇರಣೆ ಬೇರೆ ಕಡೆ ಇಲ್ಲ ಎಂದು ಶ್ಲಾಘಿಸಿದರು.
ಸಮಯ ಪ್ರಜ್ಞೆ , ಸ್ವಚ್ಛತೆ ಹಾಗೂ ಶಿಸ್ತುಗೆ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಸೇವೆಗೆ ರೋವರ್ಸ್ -ರೇಂಜರ್ಸ್ ಹೆಸರುವಾಸಿಯಾಗಿದೆ. ಕೋವಿಡ್ ಸಂದರ್ಭದಲ್ಲಿ ನೀಡಿದ ಸೇವೆ ಅಪರಿಮಿತ. ಆಳ್ವಾಸ್ ನಲ್ಲಿ ನಡೆದ ಜಾಂಬೂರಿ ದೇಶಕ್ಕೆ ಜಗದ್ವಿಖ್ಯಾತಿ ನೀಡಿತು ಎಂದು ಬಣ್ಣಿಸಿದರು.
ಇಂದು ದೇಶದಲ್ಲಿ ಪ್ರತಿಷ್ಠೆಗಾಗಿ ಶೇ 40 ರಷ್ಟು ಆಹಾರ ಪೋಲಾಗುತ್ತಿದ್ದು, ಇದು ದೇಶದ್ರೋಹದ ಕೆಲಸ ಎಂದು ಅವರು ಬೇಸರ ವ್ಯಕ್ತ ಪಡಿಸಿದರು.
ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಾತನಾಡಿ, ಸನ್ನಡತೆ, ಶಿಸ್ತು, ಒಳ್ಳೆಯ ಮನೋಭಾವದಿಂದ ಮನಸ್ಸಿನ ಶ್ರೀಮಂತಿಕೆ ಬರುತ್ತದೆ. ಅಂತಹ ಶ್ರೀಮಂತ ವ್ಯಕ್ತಿ ಡಾ.ಎಂ.ಮೋಹನ ಆಳ್ವ ಎಂದು ಬಣ್ಣಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಇಲ್ಲಿನ ಎಲ್ಲ ಕಾರ್ಯಗಳು ಕಲಿಕೆಯ ಭಾಗ. ಬದುಕಿನ ಆಂದೋಲನದ ಅಂಗ. ಇವು ನಿಮ್ಮ ಜೀವನದ ಅವಿಭಾಜ್ಯ ಅಂಗ. ಎಲ್ಲ ಮಕ್ಕಳ ಮನೋಭಾವ ಬದಲಾಗಲಿ. ಪ್ರತಿ ಕ್ಷಣವೂ ಆದರ್ಶನೀಯವಾಗಲಿ ಎಂದು ಆಶಿಸಿದರು.
ಮೂಡುಬಿದಿರೆಯ ಎಂ.ಸಿ.ಎಸ್. ಬ್ಯಾಂಕ್‌ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ , ಮೂಡುಬಿದಿರೆ ಎಂ.ಸಿ.ಎಸ್. ಬ್ಯಾಂಕ್ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್, ಬ್ರಹ್ಮಾವರದ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಹಾಗೂ ಹಿರಿಯ ವಿಜ್ಞಾನಿ ಡಾ. ಧನಂಜಯ್ ಬಿ, ಕೃಷಿ ಇಲಾಖೆಯ ಉಪ ನಿರ್ದೇಶಕ  ಶಶಿಧರ್ , ಉಡುಪಿಯ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಪುತ್ತೂರಿನ ನವನೀತ್ ನರ್ಸರಿಯ ವೇಣುಗೋಪಾಲ ಎಸ್. ಜೆ, ಮಂಗಳೂರಿನ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಪೊನ್ನಪ್ಪ, ಧನಲಕ್ಷ್ಮಿ ಕ್ಯಾಶೂಸ್ ನ ಆಡಳಿತ ನಿರ್ದೇಶಕ ಕೆ ಶ್ರೀಪತಿ ಭಟ್, ಸಿರಿ ಸಂಸ್ಥೆಯ ಜನಾರ್ದನ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್, ಸ್ಕೌಟ್ಸ್ ಮತ್ತು ಗೈಡ್ಸ್ ನ ನಿರ್ದೇಶಕ ಪ್ರಭಾಕರ್ ಭಟ್ ಇದ್ದರು.
ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲಾಯಿತು. ಆಳ್ವಾಸ್ ಸಾಂಸ್ಕೃತಿಕ ತಂಡದ ಸದಸ್ಯರು ಪ್ರಾರ್ಥನೆ ಹಾಗೂ ಗಾಯಕ ಯಶವಂತ್ ಅವರು ರೈತಗೀತೆಯನ್ನು ಹಾಡಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಡೀನ್ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

RELATED ARTICLES
- Advertisment -
Google search engine

Most Popular