ಶಿವಮೊಗ್ಗ: ಆಂಬುಲೆನ್ಸ್ ಚಾಲಕನೊಬ್ಬ ಪಾನಮತ್ತನಾಗಿ ಆಂಬುಲೆನ್ಸ್ ಚಲಾಯಿಸಿ ಟ್ಯಾಂಕರ್ ಒಂದಕ್ಕೆ ಡಿಕ್ಕಿ ಹೊಡೆದ ಘಟನೆ ರಿಪ್ಪನ್‌ಪೇಟೆಯಲ್ಲಿ ನಡೆದಿದೆ. ನಗುಮಗು ಆಂಬುಲೆನ್ಸ್ ಚಾಲಕನ ನಿರ್ಲಕ್ಷ್ಯದಿಂದಾಗಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ತಾಯಿ ಮಗು ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ಹೊಸನಗರದ ಸರ್ಕಾರಿ ಆಸ್ಪತ್ರೆಯಿಂದ ನಗುಮಗು ಆಂಬುಲೆನ್ಸ್‌ನಲ್ಲಿ ಶಿವಮೊಗ್ಗದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಘಟನೆ ನಡೆದಿದೆ. ರಿಪ್ಪನ್ ಪೇಟೆ ಸಮೀಪದ ದೂನ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬಾಣಂತಿ ಹಾಗೂ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯ ನಂತರ ಮತ್ತೊಂದು ಆಂಬುಲೆನ್ಸ್ ಸ್ಥಳಕ್ಕೆ ಬಂದಿದ್ದು, ಅದರಲ್ಲಿ ತೆರಳುವಂತೆ ಸ್ಥಳೀಯರು ಸೂಚಿಸಿದ್ದಾರೆ. ಆದರೆ ಆಂಬುಲೆನ್ಸ್ ಸಹವಾಸವೇ ಬೇಡವೆಂದು ಗಾಯಾಳುಗಳು ಕಾರಿನಲ್ಲಿ ತೆರಳಿದ್ದಾರೆ.