ಬೆಂಗಳೂರು: ಆಂಬುಲೆನ್ಸ್ ನೌಕರರು ಮೇ 6ರ ರಾತ್ರಿ 8ರಿಂದ ರಾಜ್ಯಾದ್ಯಂತ ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಮೂರು ತಿಂಗಳ ವೇತನ ಬಾಕಿ ಬಿಡುಗಡೆಗೆ ಆಗ್ರಹಿಸಿ ಈ ಪ್ರತಿಭಟನೆ ನಡೆಸಲು ಆಂಬುಲೆನ್ಸ್ ನೌಕರರು ನಿರ್ಧರಿಸಿದ್ದಾರೆ.
108 ಆಂಬುಲೆನ್ಸ್ ಸೇವೆಯ ಉಸ್ತುವಾರಿ ವಹಿಸಿಕೊಂಡ ಜಿವಿಕೆ ಸಂಸ್ಥೆಯು 2023ರ ಡಿಸೆಂಬರ್ ನಿಂದ ಏಪ್ರಿಲ್ ವರೆಗಿನ ವೇತನ ಬಾಕಿ ಇರಿಸಿಕೊಂಡಿದೆ. ಮೂರು ತಿಂಗಳ ಪೂರ್ಣ ವೇತನ ಬಾಕಿಯಿದೆ ಎಂದು 108 ಆಂಬುಲೆನ್ಸ್ ನೌಕರ ಸಂಘದ ಉಪಾಧ್ಯಕ್ಷ ಪರಮಶಿವಯ್ಯ ತಿಳಿಸಿದರು. ಆದರೆ ಡಿಸೆಂಬರ್ ಹಾಗೂ ಜನವರಿ ತಿಂಗಳಿನ ಒಟ್ಟು ಮೊತ್ತದ ಅರ್ಧದಷ್ಟು ವೇತನ ಪಾವತಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯೊಂದು ತಿಳಿಸಿದೆ.
ವೇತನವನ್ನು ನಂಬಿರುವ ನೌಕರರು ಸಂಕಷ್ಟಕ್ಕೀಡಾಗಿದ್ದಾರೆ. ಸಾಕಷ್ಟು ಬಾರಿ ವೇತನ ಬಿಡುಗಡೆಗೆ ವಿನಂತಿಸಿದ್ದೇವೆ. ಆದರೂ ವೇತನ ಪಾವತಿಯಾಗಿಲ್ಲ. ಎರಡು ದಿನಗಳ ಹಿಂದೆ ಆಂಬುಲೆನ್ಸ್ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ರಾಜ್ಯಾದ್ಯಂತ ಇಂಥ ಘಟನೆ ನಡೆಯುತ್ತಿದೆ ಎಂದು ಪರಮಶಿವಯ್ಯ ಆತಂಕ ವ್ಯಕ್ತಪಡಿಸಿದರು.
ರಾತ್ರಿ 8 ಗಂಟೆಯೊಳಗೆ ವೇತನ ಪಾವತಿಯಾಗದಿದ್ದಲ್ಲಿ ರಾಜ್ಯಾದ್ಯಂತ ಸೇವೆ ಸ್ಥಗಿತಗೊಳ್ಳಲಿದೆ. ಇದರಿಂದ ಆಗುವ ಅನಾಹುತಗಳಿಗೆ ಜಿವಿಕೆ ಸಂಸ್ಥೆ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು. ಸರಕಾರಿ ವ್ಯವಸ್ಥೆಯಡಿ ರಾಜ್ಯಾದ್ಯಂತ 715ಕ್ಕೂ ಅಧಿಕ ಆಂಬುಲೆನ್ಸ್ ಗಳು ಕಾರ್ಯಾಚರಿಸುತ್ತಿವೆ. ಇದರಲ್ಲಿ ಡ್ರೈವರ್ ಹಾಗೂ ಸಹಾಯಕ ಸಿಬ್ಬಂದಿ ಸಹಿತ 3,000 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ.