ಮಂಗಳೂರು: ಯುವಕನೊಬ್ಬ ಬಿಡಿಸಿದ ತಮ್ಮ ಆಯಿಲ್ ಕ್ಯಾನ್ವಾಸ್ ಚಿತ್ರವನ್ನು ಮೆಚ್ಚಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ನಡೆದ ರೋಡ್ ಶೋನಲ್ಲಿ ಸ್ವೀಕರಿಸಿದ್ದಾರೆ. ತೊಕ್ಕೊಟ್ಟು ಮೂಲದ ಕಲಾವಿದ ಕಿರಣ್ 24 ಇಂಚು ಎತ್ತರ ಮತ್ತು ಇಪ್ಪತ್ತು ಇಂಚು ಅಗಲದ ಪ್ರಧಾನಿ ಮೋದಿಯವರ ಭಾವಚಿತ್ರ ಹಿಡಿದುಕೊಂಡು ಕೊಡಿಯಾಲಬೈಲು ಸಮೀಪ ನಿಂತಿದ್ದರು. ಕಾರ್ಯಕ್ರಮ ಆರಂಭಕ್ಕೆ ಎರಡು ಗಂಟೆ ಮೊದಲೇ ಇಲ್ಲಿ ಅವರು ನಿಂತಿದ್ದರು. ಕಾರ್ಯಕ್ರಮ ಆರಂಭವಾಗಿ ಪ್ರಧಾನಿ ಮೋದಿ ಹತ್ತಿರ ಬರುತ್ತಿದ್ದಂತೆ ಪ್ರಧಾನಿಯವರತ್ತ ಫೋಟೊ ಎತ್ತಿ ಹಿಡಿದು ಅವರ ಗಮನ ಸೆಳೆದರು. ಫೋಟೊ ಕಂಡು ಸಂತಸಗೊಂಡ ಮೋದಿ ತಕ್ಷಣ ಭದ್ರತಾ ಸಿಬ್ಬಂದಿಗೆ ಸೂಚಿಸಿ ಅದನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಅದರಂತೆ ಕಿರಣ್ ತೊಕ್ಕೊಟ್ಟು ಬಿಡಿಸಿದ ಫೋಟೊ ಪ್ರಧಾನಿ ಮೋದಿ ಅವರ ಕೈ ಸೇರಿದೆ.