Saturday, December 14, 2024
HomeUncategorizedಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ

ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ

ಮಾನವ ಹಕ್ಕುಗಳ ಅರಿವು ಬೆಳೆಸಿಕೊಳ್ಳಿ: ಟಿ. ಶ್ಯಾಮ್ ಭಟ್

ಅಡ್ಯನಡ್ಕ: ಇಲ್ಲಿನ ಜನತಾ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವವು ಅಡ್ಯನಡ್ಕದ ಜನತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 23ರಂದು ನಡೆಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ. ಟಿ. ಶ್ಯಾಮ್ ಭಟ್ (ಐಎಎಸ್) ಅವರು ಮಾತನಾಡಿ, ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳು ಆರಂಭದಿಂದಲೂ ಒಂದು ಸಾಂಸ್ಕೃತಿಕ ಕೇಂದ್ರವಾಗಿತ್ತು. ಇಲ್ಲಿನ ಹಿರಿಯ ವಿದ್ಯಾರ್ಥಿಗಳು ವಿವಿಧ ಕಲಾರಂಗಗಳಲ್ಲಿ ಗುರುತಿಸಲ್ಪಟ್ಟು ಜನಪ್ರಿಯರಾಗಿದ್ದಾರೆ. ಈ ವಿದ್ಯಾಸಂಸ್ಥೆಗಳು ಇನ್ನಷ್ಟು ಪ್ರಖ್ಯಾತವಾಗಲಿ ಎಂದು ಹೇಳಿದರು. ಮಾನವ ಹಕ್ಕುಗಳು ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅವರು ತಿಳುವಳಿಕೆ ನೀಡಿದರು.

ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯೆ ಕಲಿಸಿದ ಗುರುಗಳು ಹಾಗೂ ವಿದ್ಯಾಸಂಸ್ಥೆಗಳ ಕೀರ್ತಿಯು ವಿದ್ಯಾರ್ಥಿಗಳ ಸಾಧನೆಯ ಮೂಲಕ ಪ್ರತಿಫಲಿಸಲ್ಪಡುತ್ತದೆ. ಒಳ್ಳೆಯ ನಡತೆ, ಸಂಸ್ಕೃತಿ, ಮಾನವೀಯ ಗುಣಗಳನ್ನು ಅಳವಡಿಸಿಕೊಂಡಾಗ ಸಮಾಜ ನಮ್ಮನ್ನು ಸ್ಮರಿಸುತ್ತದೆ. ವಿದ್ಯಾರ್ಥಿಗಳು ಅಂತಹ ಆದರ್ಶವನ್ನು ಬದುಕಿನಲ್ಲಿ ಪಾಲಿಸಬೇಕು ಎಂದು ಹೇಳಿದರು. ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜನತಾ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ಕೈಗೊಂಡ ಸಾಧನೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಆಡಳಿತಾಧಿಕಾರಿ ರಮೇಶ ಎಂ. ಬಾಯಾರು ಮಾತನಾಡಿದರು. ಜನತಾ ವಿದ್ಯಾಸಂಸ್ಥೆಗಳ 2024-25ನೇ ಸಾಲಿನ ‘ಜನತಾ ದರ್ಪಣ’ ಮುದ್ರಿತ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸಂಚಿಕೆಯ ಸಂಪಾದಕ ಜನತಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಕೆ. ಶೀನಪ್ಪ ನಾಯ್ಕ್ ಕೃತಿಯ ಮುನ್ನೋಟವನ್ನು ಮುಂದಿಟ್ಟರು. ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಕೋಶಾಧಿಕಾರಿ ಕೇಶವ ಭಟ್ ಚವರ್ಕಾಡು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಎ., ಜನತಾ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ ಎಂ., ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ. ಆರ್. ನಾಯ್ಕ್, ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಮುಳಿಯಾಲ ಅವರು ವಾರ್ಷಿಕ ವರದಿಗಳನ್ನು ಮಂಡಿಸಿದರು. ಜನತಾ ವಿದ್ಯಾಸಂಸ್ಥೆಗಳ ಹಿರಿಯ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಜಯಾನಂದ ಉಳಯ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕುಂಞ ನಾಯ್ಕ್ ಅವರು ಸನ್ಮಾನ ಪತ್ರ ವಾಚಿಸಿದರು. ಡಿಸೆಂಬರ್ 29ರಂದು ನಡೆಯುವ ಪಾಲಕರ ಮಹಾ ಸಮಾವೇಶದ ಆಮಂತ್ರಣ ಪತ್ರವನ್ನು ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಗೋವಿಂದ ಪ್ರಕಾಶ್ ಸಾಯ ಅವರು ಬಿಡುಗಡೆಗೊಳಿಸಿದರು. ಪೋಲ್ ವಾಲ್ಟ್ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿ ವಿಶೇಷ ಸಾಧನೆ ಮಾಡಿದ ಜನತಾ ಪ್ರೌಢಶಾಲೆಯ ವಿದ್ಯಾರ್ಥಿ ಪವನ್ ಕುಮಾರ್ ಹಾಗೂ ಜಿಲ್ಲಾ ಮಟ್ಟದಲ್ಲಿ ಜನತಾ ವಿದ್ಯಾಸಂಸ್ಥೆಗಳನ್ನು ಪ್ರತಿನಿಧಿಸಿದ ಎಲ್ಲಾ ಕ್ರೀಡಾಳುಗಳನ್ನು ಸಂಚಾಲಕರ ವತಿಯಿಂದ ಗೌರವಿಸಿ, ಅಭಿನಂದಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ಉದಯಕೃಷ್ಣ ಭಟ್ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕ ವಸಂತ ಗೌಡ ಅವರು ಬಹುಮಾನಿತರ ಪಟ್ಟಿ ವಾಚಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ವೀಣಾ ಟಿ. ಅತಿಥಿಗಳನ್ನು ಪರಿಚಯಿಸಿದರು. ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕು. ಶ್ರೀಲೇಖಾ ಕಾರ್ಯಕ್ರಮ ನಿರೂಪಿಸಿದರು. ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಎ. ವಂದಿಸಿದರು.

ವಾರ್ಷಿಕೋತ್ಸವದ ಪ್ರಯುಕ್ತ ಆಂಗ್ಲ ಮತ್ತು ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಜರುಗಿದವು. ಗಣೇಶ್ ಪಾಲೆಚ್ಚಾರ್ ಇವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಂದ ‘ಶ್ರೀ ಕೃಷ್ಣ ಲೀಲೆ – ಕಂಸ ವಧೆ’ ಯಕ್ಷಗಾನ ಬಯಲಾಟ ನಡೆಯಿತು. ನಾಟಕ – ಪ್ರಹಸನ – ರೂಪಕಗಳು, ವಿವಿಧ ಬಗೆಯ ಆಕರ್ಷಕ ನೃತ್ಯಗಳು ಪ್ರದರ್ಶನಗೊಂಡವು.

RELATED ARTICLES
- Advertisment -
Google search engine

Most Popular