“ಸುಭಾಷಿತನಗರ ಮಾದರಿ ನಗರವಾಗಿ ಬೆಳೆಯಲಿ“ -ಲೋಕಯ್ಯ ಶೆಟ್ಟಿ ಮುಂಚೂರು
ಸುರತ್ಕಲ್: ಸುಭಾಷಿತನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಸುರತ್ಕಲ್ ಇದರ ತೃತೀಯ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ಸನ್ಮಾನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಬಂಟರ ಸಂಘದ ವಠಾರದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಬಳಿಕ ಮಾತಾಡಿದ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಅವರು, “ಸುಭಾಷಿತನಗರಕ್ಕೆ ಹೈಟೆಕ್ ಟಚ್ ಕೊಟ್ಟಿದ್ದು ಇಲ್ಲಿನ ಅಸೋಸಿಯೇಷನ್. ಸುಮಾರು ಮೂರು ಕೋಟಿಯಷ್ಟು ಅನುದಾನ ತಂದು ರಸ್ತೆ, ಚರಂಡಿ, ದಾರಿದೀಪ ಸಹಿತ ಎಲ್ಲ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಅಸೋಸಿಯೇಷನ್ ಪದಾಧಿಕಾರಿಗಳು ಶ್ರಮವಹಿಸಿದ್ದಾರೆ. ಮುಂಬರುವ ವರ್ಷದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆದು ಸುಭಾಷಿತನಗರ ಮಾದರಿ ನಗರವಾಗಿ ಬೆಳೆಯಲಿ” ಎಂದು ಶುಭಹಾರೈಸಿದರು.
ಸುಭಾಷಿತನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಇದರ ಅಧ್ಯಕ್ಷ ರಮೇಶ್ ಶೆಟ್ಟಿ ಮಾತಾಡಿ, “ಸಂಘಟನೆಯ ಮೂರನೇ ವರ್ಷದ ಸಂಭ್ರಮದಲ್ಲಿ ನಾವಿದ್ದೇವೆ. ನಮ್ಮ ಪ್ರತಿಯೊಂದು ಕಾರ್ಯಕ್ಕೆ ಸುಭಾಷಿತನಗರದ ಪ್ರತಿಯೊಬ್ಬರೂ ಜೊತೆಗೂಡಿದ್ದಾರೆ. ಅವರೆಲ್ಲರಿಂದ ಸಂಘಟನೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮುಂದೆಯೂ ಇದೇ ರೀತಿ ಜನರ ಸೇವೆ ಮಾಡಲಿದೆ” ಎಂದರು.
ಬಳಿಕ ವೇದಿಕೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಉದ್ಯಮಿ ಪ್ರಶಾಂತ್ ಎಸ್ ಎಂ ಹಾಗೂ ದಿನೇಶ್ ಅವರನ್ನು ಅಸೋಸಿಯೇಷನ್ ವತಿಯಿಂದ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘಟನೆಯ ಉಪಾಧ್ಯಕ್ಷ ತಾರಾನಾಥ ಸಾಲ್ಯಾನ್ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು ಮತ್ತಿತರರು ಉಪಸ್ಥಿತರಿದ್ದರು.
ಅಸೋಸಿಯೇಷನ್ ಜೊತೆ ಕಾರ್ಯದರ್ಶಿ ಲಕ್ಷ್ಮಿ ಚಂದ್ರಶೇಖರ ಆಚಾರ್ಯ ಅತಿಥಿಗಳನ್ನು ಸ್ವಾಗತಿಸಿದರು. ಕೋಶಾಧಿಕಾರಿ ನರಸಿಂಹ ಸುವರ್ಣ ಧನ್ಯವಾದ ಸಮರ್ಪಿಸಿದರು.