Thursday, December 5, 2024
Homeತುಳುನಾಡುತುಳುವಿಗೆ ಬರಲಿದೆ ಮತ್ತೊಂದು ವಿನೂತನ ಅದ್ದೂರಿ ನಾಟಕ "ಶಿವಾಜಿ"

ತುಳುವಿಗೆ ಬರಲಿದೆ ಮತ್ತೊಂದು ವಿನೂತನ ಅದ್ದೂರಿ ನಾಟಕ “ಶಿವಾಜಿ”

ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌ ನೇತೃತ್ವದ ಕಲಾಸಂಗಮದಿಂದ ಮತ್ತೊಂದು ಸಂಚಲನಕ್ಕೆ ವೇದಿಕೆ ಸಿದ್ಧ


ಮಂಗಳೂರು: ಹೊಸತನಕ್ಕೆ ಇನ್ನೊಂದು ಹೆಸರಾಗಿರುವ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ಅವರಿಂದ ತುಳು ನಾಟಕ ರಂಗಕ್ಕೆ ಮತ್ತೊಂದು ವಿನೂತನ ಅದ್ದೂರಿ ನಾಟಕ ಸದ್ಯವೇ ಸೇರ್ಪಡೆಯಾಗಲಿದೆ. ಆ ಮೂಲಕ ತುಳು ರಂಗಭೂಮಿಯ ಕಲಾಮಾತೆಗೆ ಮತ್ತೊಂದು ಚಿನ್ನದ ಕಿರೀಟ ಸಮರ್ಪಣೆಯಾಗಲಿದೆ.
ಈಗಾಗಲೇ “ಶಿವದೂತೆ ಗುಳಿಗೆ” ನಾಟಕದ ಮೂಲಕ ಹೊಸ ದಾಖಲೆ ಬರೆದಿರುವ ಹಾಗೂ ಬೇರೆ ಭಾಷೆಯ ರಂಗಕರ್ಮಿಗಳು ತುಳು ರಂಗಭೂಮಿಯನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿರುವ ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌ ಅವರು ಈ ಬಾರಿ ಚಾರಿತ್ರಿಕ ನಾಟಕದತ್ತ ದೃಷ್ಟಿ ನೆಟ್ಟಿದ್ದಾರೆ. ಈ ಹಿಂದೆ ಸಾಕಷ್ಟು ಹಿಟ್‌ ಸಾಮಾಜಿಕ ನಾಟಕಗಳನ್ನು ನೀಡಿರುವ ಅವರು, ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳ ಮೂಲಕ ತುಳು ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ. ಇವರು ಗುಳಿಗನ ನಾಟಕ ಮಾಡಿದ ಬಳಿಕ ಹಲವಾರು ದೈವಪ್ರಧಾನ ನಾಟಕಗಳು, ಸಿನಿಮಾಗಳು ಬಿಡುಗಡೆಗೊಂಡು ಪ್ರದರ್ಶನ ಕಂಡವು. ಬಳಿಕ ದೈವಗಳನ್ನು ನಾಟಕ, ಸಿನಿಮಾಗಳನ್ನು ತೋರಿಸುವುದು ಎಷ್ಟು ಸರಿ ಎಂಬ ಬಗ್ಗೆ ಪರ- ವಿರೋಧ ಚರ್ಚೆಗಳೂ ಆರಂಭವಾದವು. ಇದಕ್ಕೆಲ್ಲ ತಲೆಕೆಡಿಸಿಕೊಳ್ಳದ ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌ ಅವರು ನಾಟಕಗಳ ಮೂಲಕವೇ ಅದಕ್ಕೆ ಉತ್ತರ ಕೊಡುತ್ತಾ ಹೋದರು.
ಈ ಬಾರಿ “ಶಿವಾಜಿ” ಹೆಸರಿನ ನಾಟಕದ ಮೂಲಕ ಮತ್ತೊಂದು ರೀತಿಯಲ್ಲಿ ಸಂಚಲನ ಮೂಡಿಸಲು ಸಿದ್ಧರಾಗಿದ್ದಾರೆ. ಶಶಿರಾಜ್‌ ಕಾವೂರ್‌ ಅವರ ಕಥೆ, ಚಿತ್ರಕಥೆ ಇರುವ ಶಿವಾಜಿ ನಾಟಕವನ್ನು ಅದ್ದೂರಿಯಾಗಿಸಲು ಎಲ್ಲ ರೀತಿಯಿಂದಲೂ ಕೊಡಿಯಾಲ್‌ಬೈಲ್‌ ಶ್ರಮಿಸುತ್ತಿದ್ದಾರೆ. ರಂಗ ಸಜ್ಜಿಕೆಯನ್ನು ಮುಂಬಯಿ ಕೇಂದ್ರೀಕರಿಸಿಕೊಂಡು ಮಾಡುತ್ತಿದ್ದಾರೆ. ನಾಟಕ ಬಗ್ಗೆ ಜನರಿಗೆ ತಿಳಿದ ಕೂಡಲೇ ಸಂಘಸಂಸ್ಥೆಗಳು ಶಿವಾಜಿ ಪ್ರದರ್ಶನಕ್ಕೆ ದಿನಾಂಕ ನಿಗದಿ ಮಾಡಲು ಪೈಪೋಟಿಗೆ ಬಿದ್ದಿವೆ. ಲಭ್ಯ ಮಾಹಿತಿ ಪ್ರಕಾರ ಈಗಾಗಲೇ ಸುಮಾರು 25ಕ್ಕೂ ಹೆಚ್ಚು ನಾಟಕಕ್ಕೆ ಬೇಡಿಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಹಿಂದೂ ಸಂಘಟನೆಯವರು ಶಿವಾಜಿ ನಾಟಕದ ಬಗ್ಗೆ ಹೆಚ್ಚಿನ ಕುತೂಹಲ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಶಿವಾಜಿ ನಾಟಕಕ್ಕಾಗಿ ಸಾಕಷ್ಟು ಅಧ್ಯಯನ ಹಾಗೂ ಹೋಂವರ್ಕ್‌ ಮಾಡಲಾಗಿದೆ. ಅದ್ದೂರಿತನದಲ್ಲಿ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಶಿವದೂತೆ ಗುಳಿಗೆ ನಾಟಕದ ಪ್ರದರ್ಶನವು 700ರ ಆಸುಪಾಸಿನಲ್ಲಿದ್ದು, ಅದಕ್ಕಿಂತ ಹೆಚ್ಚಿನ ಬೇಡಿಕೆ ಶಿವಾಜಿ ನಾಟಕಕ್ಕೆ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಪೂರ್ವಸಿದ್ಧತೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಮರಾಠಿ ನಾಟಕದ ಶೈಲಿಯಲ್ಲಿ ಶಿವಾಜಿಯನ್ನು ತೋರಿಸಲು ಕೊಡಿಯಾಲ್ ಬೈಲ್ ಮುಂದಾಗಿದ್ದಾರೆ.
ಶಿವಾಜಿ ನಾಟಕಕ್ಕೆ ಎ.ಕೆ. ವಿಜಯ್‌ ಅವರ ಸಂಗೀತವಿದ್ದು, ಶೀಘ್ರದಲ್ಲೇ ರಿಹರ್ಸಲ್‌ ನಡೆಸಿ ಪ್ರದರ್ಶನಕ್ಕೆ ಸಿದ್ಧರಾಗಲಿದ್ದೇವೆ. ಆದಷ್ಟು ಬೇಗ ಶಿವಾಜಿ ನಾಟಕವನ್ನು ಜನರ ಮುಂದಿಡಲು ಉತ್ಸುಕರಾಗಿದ್ದೇವೆ. ಮೊದಲ ಪ್ರದರ್ಶನವು ಮಾಚ್೯ 6 ರಂದು ಪ್ರದರ್ಶನಗೊಳ್ಳಲಿದೆ. ನಾಟಕವನ್ನು ಜನ ಮೆಚ್ಚುವ ರೀತಿಯಲ್ಲಿ ಪ್ರದರ್ಶಿಸಲು ಬೇಕಾದ ಪೂರಕ ಸಿದ್ಧತೆಗಳು ಚುರುಕಿನಿಂದ ಸಾಗುತ್ತಿವೆ ಎಂದು ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular