Thursday, September 12, 2024
Homeಉಡುಪಿರಾಜಕಾರಣ ಮತ್ತು ಆದರ್ಶಕ್ಕೆ ಇನ್ನೊಂದು ಹೆಸರು ಡಾ! ವಿ.ಎಸ್. ಆಚಾರ್ಯ' : ಸಂಸದ ಕೋಟ

ರಾಜಕಾರಣ ಮತ್ತು ಆದರ್ಶಕ್ಕೆ ಇನ್ನೊಂದು ಹೆಸರು ಡಾ! ವಿ.ಎಸ್. ಆಚಾರ್ಯ’ : ಸಂಸದ ಕೋಟ

ರಾಜ್ಯದ ಗೃಹ ಸಚಿವರಾಗಿದ್ದ ಡಾ! ವಿ.ಎಸ್. ಆಚಾರ್ಯ ಅವರ ಕಾರ್ಯತತ್ಪರತೆ, ಜವಾಬ್ದಾರಿ, ಹೊಣೆಗಾರಿಕೆ, ಕರ್ತವ್ಯ ನಿಷ್ಠೆ ಎಲ್ಲರಿಗೂ ಪ್ರೇರಣಾದಾಯಕ. ಅವರ ಜೀವನಾದರ್ಶ ಎಂದಿಗೂ ಅನುಕರಣೀಯ. ರಾಜಕೀಯವನ್ನು ವೃತ್ತಿಯಾಗಿಸದೇ ವೃತವಾಗಿ ಸ್ವೀಕರಿಸಿ ಜನ ಸೇವೆಗೈದವರು. ರಾಜಕಾರಣ ಮತ್ತು ಆದರ್ಶಕ್ಕೆ ಇನ್ನೊಂದು ಹೆಸರು ಡಾ! ವಿ.ಎಸ್. ಆಚಾರ್ಯ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ‌ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ದೀನದಯಾಳ್ ಚಾರಿಟೇಬಲ್ ಟ್ರಸ್ಟ್(ರಿ.) ವತಿಯಿಂದ ನಗರಸಭಾ ವ್ಯಾಪ್ತಿಯ ಪ್ರೌಢಶಾಲೆಗಳಲ್ಲಿ ಎಸೆಸೆಲ್ಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ‘ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮರಣ ಪಾರಿತೋಷಕ’ ಹಾಗೂ ‘ಡಾ! ವಿ.ಎಸ್. ಆಚಾರ್ಯ ಸ್ಮರಣ ಪಾರಿತೋಷಕ’ ಮತ್ತು ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯೊಬ್ಬಳಿಗೆ ‘ಕುಮಾರಿ ಗಾಯತ್ರಿ ಸ್ಮರಣ ಪಾರಿತೋಷಕ’ ನೀಡಿ ಗೌರವಿಸಿ ಶುಭ ಹಾರೈಸಿದರು.

ವಿಧಾನ ಪರಿಷತ್ ಸದಸ್ಯ ಡಾ! ಧನಂಜಯ ಸರ್ಜಿ ಮಾತನಾಡಿ, ಡಾ! ವಿ.ಎಸ್. ಆಚಾರ್ಯ ಅವರು ಮೃದು ಸ್ವಭಾವದವರಾಗಿದ್ದರೂ ಗಟ್ಟಿ ನಿರ್ಧಾರಕ್ಕೆ ಹೆಸರುವಾಸಿ. ಸಮಾಜಕ್ಕೆ ಏನು ಬೇಕು ಎಂಬುದನ್ನು ತಿಳಿದು ಅನುಷ್ಠಾನ ಮಾಡಿದವರು ಎಂದರು. ಜೀವನದ ಪ್ರಗತಿಗೆ ದೊಡ್ಡ ಕನಸು ಕಾಣಬೇಕು. ಕನಸು ದೊಡ್ಡದಾದಂತೆ ಶ್ರಮವೂ ಹೆಚ್ಚಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು‌ ಹೇಳಿದರು.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ದೃಷ್ಟಾರರಾಗಿದ್ದ ಡಾ! ವಿ.ಎಸ್. ಆಚಾರ್ಯ ಅವರು ಉಡುಪಿಯ ಅಭಿವೃದ್ಧಿ ವಿಶೇಷ ಕೊಡುಗೆ ನೀಡಿದ್ದಾರೆ. ನವ ಉಡುಪಿಯ ನಿರ್ಮಾತೃ ಎನಿಸಿಕೊಂಡಿರುವ ಅವರ ದೂರದರ್ಶಿತ್ವದ ಚಿಂತನೆಗಳು, ತತ್ವಾದರ್ಶಗಳು ಎಲ್ಲರಿಗೂ ಸ್ಪೂರ್ತಿದಾಯಕ ಎಂದರು.

ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಅವರು ಟ್ರಸ್ಟ್ ನ ಉದ್ದೇಶ ಹಾಗೂ ಡಾ! ಶ್ಯಾಮ ಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ ಹಾಗೂ ಡಾ! ವಿ.ಎಸ್. ಆಚಾರ್ಯ ಅವರ ಜೀವನ ತತ್ವ ಮತ್ತು ಸಾಧನೆಯನ್ನು ವಿವರಿಸಿದರು.

ಟ್ರಸ್ಟ್ ನ ಉಪಾಧ್ಯಕ್ಷೆ ರಶ್ಮಿ ಆರ್. ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ನಗರಸಭೆ ವ್ಯಾಪ್ತಿಯ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಒಟ್ಟು 36 ಪ್ರೌಢಶಾಲೆಗಳ ಅತಿ ಹೆಚ್ಚು ಅಂಕ ಪಡೆದ 38 ವಿದ್ಯಾರ್ಥಿಗಳಿಗೆ ಈ ಪಾರಿತೋಷಕಗಳನ್ನು ನೀಡಲಾಯಿತು.

ಟ್ರಸ್ಟಿನ ನಿಕಟಪೂರ್ವ ಅಧ್ಯಕ್ಷ ಮೋಹನ ಉಪಾಧ್ಯಾಯ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು.

ಟ್ರಸ್ಟಿಗಳಾದ ವಿಶ್ವನಾಥ್ ಭಟ್, ನಯನಾ ಗಣೇಶ್, ಕೆ.ಟಿ. ಪ್ರಸಾದ್ ಹಾಗೂ ಪುರಸ್ಕಾರ ಪಡೆದ ವಿದ್ಯಾರ್ಥಿಗಳು, ಪೋಷಕರು ಮತ್ತು ಆಹ್ವಾನಿತ ಪ್ರಮುಖರು ಉಪಸ್ಥಿತರಿದ್ದರು.

ಟ್ರಸ್ಟಿ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

RELATED ARTICLES
- Advertisment -
Google search engine

Most Popular