ಬೆಂಗಳೂರು: ನಗರದ ಥಣಿಸಂದ್ರದ ಸಾಮರ್ ಇಂಟರ್ನ್ಯಾಷನಲ್ ಇಸ್ಲಾಮಿಕ್ ಶಾಲೆ ತನ್ನ ಹೆಸರು ಬದಲಾಯಿಸಿಕೊಂಡು ಶಿಕ್ಷಣ ಇಲಾಖೆಯನ್ನು ದಾರಿ ತಪ್ಪಿಸುವ ಕೆಲಸದಲ್ಲಿ ತೊಡಗಿದೆ. ಭಾರತ ವಿರೋಧಿ ಚಟುವಟಿಕೆ ನಡೆಸುತ್ತಿರುವ ಶಾಲಾ ಆಡಳಿತ ಮಂಡಳಿ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ನಾಡು, ನುಡಿ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮಹಿಳಾ ಅಧ್ಯಕ್ಷರಾದ ಶೈನಿ, ಉಪಾಧ್ಯಕ್ಷರಾದ ಮಂಜುಳಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾ ಲಕ್ಷ್ಮಿ, ಶಿಕ್ಷಣ ಸಂಸ್ಥೆ ಭಾರತ ವಿರೋಧಿ ಚಟುವಟಿಕೆಗಳಾದ. ತೆರಿಗೆ ವಂಚನೆ, ನಕಲಿ ದಾಖಲೆ ಸೃಷ್ಟಿ, ಅಪರಾಧ, ವಂಚನೆ, ಸಾರ್ವಜನಿಕ ಸೊಸೈಟಿ ಹೆಸರಿನಲ್ಲಿ ವಿದ್ಯಾರ್ಥಿಗಳು, ಪೋಷಕರ ನಂಬಿಕೆಗೆ ಧಕ್ಕೆ ತರುತ್ತಿದೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ನೀಡಿದ್ದ ದೂರು ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದೆ. ಆದರೆ ಸಂಸ್ಥೆಯವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೇ ಶಾಲಾ ಆಡಳಿತ ಮಂಡಳಿ ನಾಮಫಲಕ ಬದಲಾಯಿಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದೆ ಎಂದರು.
ಒಂದೇ ಜಾಗದಲ್ಲಿ ಎರಡು ಶಾಲೆ ಹೆಸರು ಮತ್ತು ಮೂರು ಆಡಳಿತ ಮಂಡಳಿ ಹೆಸರು ಬಳಸಿಕೊಳ್ಳುತ್ತಿದೆ. ಶಾಲಾ ನಾಮಫಲಕದಲ್ಲಿ ತೋರಿಸಿದ ಶಾಲೆ ಹೆಸರು ಸಾಮರ್ ಇಂಟರ್ನ್ಯಾಷನಲ್ ಇಸ್ಲಾಮಿಕ್ ಶಾಲೆ ನಿರ್ವಹಿಸಲ್ಪಡುವ ಆಡಳಿತ ಮಂಡಳಿ ಅಥವಾ ಸಂಸ್ಥೆಯಾದ “ಜಾಮೀಯ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮುಂಬೈ” ಮತ್ತು ” ಅಲ್-ಜಾಮೀಯ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮುಂಬೈ” ಎಂದು ನಮೂದಿಸಿದ್ದಾರೆ. ಇದು ನೋಂದಾಯಿತವಲ್ಲದ ಸಂಸ್ಥೆಗಳಾಗಿವೆ. ಇದನ್ನು ಸಹ ನಮ್ಮ ದೂರಿನಲ್ಲಿ ಸಲ್ಲಿಸಿದ್ದು ಇದರ ಬಗ್ಗೆ ಮುಂಬೈನ ಸಾರ್ವಜನಿಕ ಸೊಸೈಟಿ ನೋಂದಣಿ ಕಛೇರಿಯಿಂದ ಆರ್ ಟಿ ಐ ಮುಖಾಂತರ ಪಡೆದ ದಾಖಲೆಗಳನ್ನು ಸಹ ಶಿಕ್ಷಣ ಇಲಾಖೆಗೆ ಒದಗಿಸಿದ್ದೇವೆ ಎಂದು ಹೇಳಿದರು.
ನಂತರ ಈ ಶಿಕ್ಷಣ ಸಂಸ್ಥೆಗೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಛೇರಿ ಎರಡು ಬಾರಿ ನೋಟೀಸ್ ಜಾರಿ ಮಾಡಿದೆ. ಆದರೆ ಈ ಶಾಲೆಯ ಮಾನ್ಯತೆ ಬಗ್ಗೆ ತಿಳಿಯಲು ಆರ್ ಟಿ ಐ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದು, ಮಾಹಿತಿ ನಿರೀಕ್ಷಿಸಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೆ ಶಾಲೆಯ ನಾಮಫಲಕವನ್ನು ಬದಲಾಯಿಸಿದ್ದು ಸಾಕ್ಷ್ಯ ನಾಶಪಡಿಸುವ ಕೆಲಸ ಮಾಡುತ್ತಿರುತ್ತದೆ. ಆದ್ದರಿಂದ ಶಾಲೆಯವರು ತಮ್ಮ ಶಾಲೆ ಮತ್ತು ಸಂಸ್ಥೆಯ ಹೆಸರನ್ನು ದುರುಪಯೋಗಪಸಿಕೊಂಡು ಸರ್ಕಾರದ ಇತರೆ ಇಲಾಖೆಗಳಿಗೂ ವಂಚಿಸುತ್ತಿರುವುದು ಕಂಡು ಬಂದಿದೆ. ಇದನ್ನು ತಪ್ಪಿಸಲು ಇಂತಹ ಶಾಲೆಯ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
