2025 ಮೇ 6ರಿಂದ 11ರ ತನಕ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿ
ಪುತ್ತಿಗೆ : ಅಂಗಡಿಮೊಗರು ಸಮೀಪದ ಇತಿಹಾಸ ಪ್ರಸಿದ್ಧ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯದ ಪೂರ್ವಭಾವಿಯಾಗಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ದಿವ್ಯ ಉಪಸ್ಥಿತಿಯಲ್ಲಿ ಅನುಜ್ಞಾ ಪ್ರಾರ್ಥನೆ, ಬಲಿವಾಡು ಕೂಟ, ಜೀರ್ಣೋದ್ಧಾರದ ವಿನಂತಿ ಪತ್ರ ಬಿಡುಗಡೆ ಕಾರ್ಯಕ್ರಮ ಜರಗಿತು. ಇದರಂಗವಾಗಿ ಕ್ಷೇತ್ರದಲ್ಲಿ ಗಣಹೋಮ,ಮೃತ್ಯುಂಜಯ ಹೋಮ, ಬಲಿವಾಡು ಕೂಟ ಜರಗಿತು. ಬಳಿಕ ನಡೆದ ಅನುಜ್ಞ ಪ್ರಾರ್ಥನೆಯ ಸಂದರ್ಭ ಜೀರ್ಣೋದ್ಧಾರ ಕಾರ್ಯ ಹಾಗೂ 2025 ಮೇ 11 ಬ್ರಹ್ಮಕಲಶೋತ್ಸವವಾಗಿ ದಿನಾಂಕ ನಿಗದಿಪಡಿಸಲಾಯಿತು. ಈ ವರ್ಷದ ಧನುರ್ಮಾಸದ ಧನು ಪೂಜೆ ಕಳೆದು ಮಕರ ಸಂಕ್ರಮಣದ ಬಳಿಕ ಬಾಲಲಯ ನಿರ್ಮಿಸಿ ಜೀರ್ಣೋದ್ಧಾರ ಕಾರ್ಯ ನಡೆಸಲಾಗುತ್ತದೆ. ಕ್ಷೇತ್ರದ ಮಾಡು,,ಶಾಸ್ತರ ಗುಡಿ ಹಾಗೂ ನಮಸ್ಕಾರ ಮಂಟಪಕ್ಕೆ ತಾಮ್ರದ ಹೊದಿಕೆ, ಸುತ್ತು ಚಪ್ಪರದ ಹೊದಿಕೆ, ಪಡು ಗೋಪುರ ನಿರ್ಮಾಣ ಜತೆಗೆ ಮೂಲ ನಾಗ ಸಾನಿಧ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದೆಂದು ಕ್ಷೇತ್ರ ಆಡಳಿತ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿಯವರು ಜಂಟಿಯಾಗಿ ತಿಳಿಸಿದ್ದಾರೆ. ಇದರ ಅಂಗವಾಗಿ ಜೀರ್ಣೋದ್ಧಾರದ ವಿನಂತಿಪತ್ರವನ್ನು ಬಿಡುಗಡೆಗೊಳಿಸಲಾಯಿತು. ಬ್ರಹ್ಮ ಶ್ರೀ ದೇಲಂಪಾಡಿ ಗಣೇಶ ತಂತ್ರಿ ವಿನಂತಿಪತ್ರ ಮತ್ತು ತಾಮ್ರ ಹೊದಿಕೆ ಕೂಪನ್ ಬಿಡುಗಡೆಗೊಳಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗಿರಿಧರ ಶೆಟ್ಟಿ ಮಂಗಳೂರು ಸಭೆಯ ಅಧ್ಯಕ್ಷತೆವಹಿಸಿದ್ದರು.ಸಭೆಯಲ್ಲಿ ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಶಂಕರ ರೈ ಮಾಸ್ತರ್, ಆಡಳಿತ ಮೊಕ್ತೇಸರ ನ್ಯಾಯವಾದಿ ಸುಬ್ಬಯ್ಯ ರೈ ಇಚ್ಲಂಪಾಡಿ, ಜೀರ್ಣೋದ್ದಾರ ಸಮಿತಿ ಕೋಶಾಧಿಕಾರಿ ಶಿವಪ್ಪ ರೈ ಕೊರತ್ತಿಪಾರೆ,ಆಶೋಕ್ ಬಾಡೂರು,ಎಂ.ಕೆ.ಆನಂದ, ಅಮರನಾಥ ರೈ ಚೀಂಕಣಮೊಗರು,ಗೋಪಾಲಕೃಷ್ಣ ಅಡಿಗಳು, ಮೋಹನ ಪೂಜಾರಿ ಪರ್ಲರಿಯ ಮೊದಲಾದವರು ಉಪಸ್ಥಿತರಿದ್ದರು. ಸೇವಾ ಸಮಿತಿ ಅಧ್ಯಕ್ಷ ಡಿ ದಾಮೋದರ ಸ್ವಾಗತಿಸಿ ಕಾರ್ಯದರ್ಶಿ ಡಿ.ರಾಜೇಂದ್ರ ರೈ ವಂದಿಸಿದರು.