ಬೆಂಗಳೂರು : ಬೆಂಗಳೂರಿನ ಮೆಥೋಡಿಸ್ಟ್ ಚರ್ಚ್‌ನ ಬಿಷಪ್ ಆಗಿ ಡಾ. ಅನಿಲ್ ಕುಮಾರ್ ಸರ್ವಾಂದ್ ಇಂದು ಪದಗ್ರಹಣ ಮಾಡಿದರು. ಬೆಂಗಳೂರು ಎಪಿಸ್ಕೋಪಲ್ ಪ್ರದೇಶದ ಹೊಸ ಬಿಷಪ್ ಆಗಿ ಇವರನ್ನು ನೇಮಕ ಮಾಡಲಾಗಿದ್ದು, ಇಂದು ಬೆಳಿಗ್ಗೆ ಸುಸೂತ್ರವಾಗಿ ಅಧಿಕಾರ ಸ್ವೀಕರಿಸಿದರು.
ಹೊಸದಾಗಿ ನೇಮಕಗೊಂಡ ಬಿಷಪ್‌ರ ಸ್ವಾಗತ ಸಮಾರಂಭ ಬೆಂಗಳೂರು, ರಿಚ್‌ಮಂಡ್ ಟೌನ್‌ನ ಬಾಲ್ಡ್‌ವಿನ್ ಇಂಟರ್‌ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ನಡೆಯಿತು. ಈ ವರೆಗೆ ಬಿಷಪ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮಣ ನಾಮದೇವ್ ಕರ್ಕರೆ ಅವರ ಜಾಗಕ್ಕೆ ಡಾ. ಅನಿಲ್ ಕುಮಾರ್ ಸರ್ವಾಂದ್ ಅಧಿಕಾರ ವಹಿಸಿಕೊಂಡರು. ಇಡೀ ಕಾರ್ಯಕ್ರಮವನ್ನು ಕನ್ನಡದಲ್ಲಿ ಆಯೋಜಿಸಿದ್ದು ವಿಶೇಷವಾಗಿತ್ತು.
ಭಾರತದ ಮೆಥೋಡಿಸ್ಟ್ ಚರ್ಚ್‌ನ ಕಾರ್ಯಕಾರಿ ಮಂಡಳಿ ಜನವರಿ 31ರಂದು ಮುಂಬೈನಲ್ಲಿ ನಡೆದಿದ್ದು, ಈ ಸಭೆಯಲ್ಲಿ ಮೂರನೇ ಎರಡಷ್ಟು ಬಹುಮತದಿಂದ ಡಾ. ಅನಿಲ್ ಕುಮಾರ್ ಸರ್ವಾಂಡ್ ಅವರನ್ನು ಬೆಂಗಳೂರು ಎಪಿಸ್ಕೋಪಲ್ ಪ್ರದೇಶದ ಬಿಷಪ್ ಆಗಿ ನೇಮಕ ಮಾಡಿದೆ. ಈ ಪ್ರದೇಶದಲ್ಲಿ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾದ ಕೆಲವು ಭಾಗಗಳು ಒಳಗೊಂಡಿವೆ.
ವಿಧ್ಯುಕ್ತವಾಗಿ ಪದಗ್ರಹಣ ಸಮಾರಂಭದ ನಂತರ ಮಾತನಾಡಿದ ಡಾ. ಅನಿಲ್ ಕುಮಾರ್ ಸರ್ವಾಂಡ್, ಸಂಸ್ಥೆಯ ಶ್ರೇಯೋಭಿವೃದ್ದಿಗಾಗಿ ಸಾಮೂಹಿಕ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸುವ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡಲು ಪ್ರಯತ್ನಿಸುತ್ತೇನೆ. ಇಲ್ಲಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಮಸ್ಯೆಗಳಿದ್ದರೆ ಆದ್ಯತೆ ಮೇರೆಗೆ ಬಗೆಹರಿಸುವುದಾಗಿ ತಿಳಿಸಿದರು.
ನಾಡಿನ ಮೂಲೆ ಮೂಲೆಗಳಿಂದ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಗ್ರಾಮೀಣ ಜನರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಂದಿನ ಕಾರ್ಯಕ್ರಮದಲ್ಲಿ ಕನ್ನಡ ಕಂಪು ಹರಡಿದ್ದು, ಕನ್ನಡ ಭಾಷೆ ಜನರ ಹೃದಯಕ್ಕೆ ಸ್ಪಂದಿಸಲು ಸಹಕಾರಿಯಾಗಲಿದೆ. ಮೆಥೋಡಿಸ್ಟ್ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಭಾಷೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುವುದು. ಕ್ರೈಸ್ತ ಧರ್ಮಗುರುಗಳು ಕನ್ನಡ ಭಾಷೆಯಲ್ಲಿ ಗೀತೆಗಳನ್ನು ರಚಿಸಿ ಭಾಷಾ ಶ್ರೀಮಂತಿಕೆ ಹೆಚ್ಚಿಸಲು ಕೊಡುಗೆ ನೀಡಿದ್ದಾರೆ ಎಂದರು.