ಪುತ್ತೂರು: ಬೆಂಗಳೂರು ಕಂಬಳಕ್ಕೆ ಅವಕಾಶ ನೀಡಬಾರದು ಎಂದು ಪೆಟಾ ಸಂಘಟನೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಕಂಬಳದ ಪರವಾಗಿ ವೈಯಕ್ತಿಕ ನೆಲೆಯಲ್ಲಿ ತಾವು ಹೋರಾಟ ನಡೆಸುವುದಾಗಿ ಬೆಂಗಳೂರು ಕಂಬಳಕೂಟದ ಗೌರವಾಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ವಕೀಲ ಧ್ಯಾನ್ ಚಿನ್ನಪ್ಪ ಮೂಲಕ ಸೋಮವಾರ ಪೆಟಾ ಬೆಂಗಳೂರು ಕಂಬಳ ವಿರುದ್ಧ ಪಿಐಎಲ್ ಸಲ್ಲಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಕೋಣಗಳನ್ನು ತರುವುದು ತ್ರಾಸದಾಯಕವಾಗಿದ್ದು, ಇದರಿಂದ ಕೋನಗಳಿಗೆ ತೊಂದರೆಯಾಗುತ್ತಿದೆ ಎಂದು ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿದೆ.
ವೈಯಕ್ತಿಕ ನೆಲೆಯಲ್ಲಿ ನ್ಯಾಯವಾದಿಗಳ ಮೂಲಕ ಹೈಕೋರ್ಟ್‌ಗೆ ಅ.22ರಂದು ಅರ್ಜಿ ಹಾಕಿದ್ದು, ಸರಕಾರದ ಪರವಾಗಿ ಪೂರಕ ಮಾಹಿತಿ ನೀಡಲು ನನ್ನನ್ನು ಪ್ರತಿವಾದಿಯನ್ನಾಗಿ ಪರಿಗಣಿಸಬೇಕು ಎಂದು ಕೋರಿದ್ದೇನೆ. ಬೆಂಗಳೂರಿನಲ್ಲಿ ಕಂಬಳ ನಡೆಸಲು ಅವಕಾಶ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಕಾನೂನು ಹೋರಾಟ ಮುಂದುವರಿಸಲಿದ್ದೇನೆ ಎಂದು ಅವರು ಹೇಳಿದ್ದಾರೆ.