ಶ್ರೀ ಪಲಿಮಾರು ಮಠದ ಶಾಖಾ ಮಠವಾದ ಮೀರರೋಡಿನ ಶ್ರೀ ಬಾಲಾಜಿ ಸನ್ನಿಧಾನದಲ್ಲಿ ಶ್ರೀನಿವಾಸ ದೇವರಿಗೆ 12ವರ್ಷಗಳ ಬಳಿಕ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆಯಿತು. ಬಳಿಕ ಪರಿವಾರ ದೇವತೆಗಳಾದ ಶ್ರೀಲಕ್ಷ್ಮೀದೇವಿ, ಶ್ರೀಮುಖ್ಯಪ್ರಾಣ ದೇವರು, ಶ್ರೀರುದ್ರದೇವರು, ಶ್ರೀಗಣಪತಿ ದೇವರು, ನಾಗ ಮತ್ತು ನವಗ್ರಹರಿಗೆ ಕ್ರಮವಾಗಿ ಪಂಚ ಕಲಾಶಾಭಿಷೇಕ ನಡೆಯಿತು.
ಶ್ರೀಪಲಿಮಾರು ಮಠಾಧೀಶರಾದ ಶ್ರೀಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಹಾಗೂ ತಂತ್ರಸಾರಾಗಮ ವಿದ್ವಾಂಸರಾದ ಕುತ್ಯಾರು ಶ್ರೀರಾಜಗೋಪಾಲ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಮಾರ್ಚ್ 15ನೇ ತಾರೀಕಿನಿಂದ 18ರವರೆಗೆ ಕಳೆದ ಮೂರು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮಗಳು ಬ್ರಹ್ಮಕಲಶಾಭಿಷೇಕದೊಂದಿಗೆ ಮುಕ್ತಾಯಗೊಂಡವು.
ಪರಿವಾರ ದೇವತಾ ಸಹಿತ ಶ್ರೀನಿವಾಸ ದೇವರಿಗೆ ಕಳಶಾಭಿಷೇಕದ ನಂತರ ಸಪ್ತತಿ (70ವರ್ಷ) ಸನಿಹದಲ್ಲಿರುವ ದಲ್ಲಿರುವ ಶ್ರೀಪಲಿಮಾರು ಮಠಾಧೀಶರಿಗೆ ಶ್ರೀಧನ್ವಂತರಿ ಹೋಮ ಹಾಗೂ ಅದರ ಕಲಶಾಭಿಷೇಕವು ನಡೆಯಿತು.
ತದನಂತರ ನಡೆದ ಅನುಗ್ರಹ ಸಂದೇಶದಲ್ಲಿ ಅಭಿಷೇಕದಿಂದ ರಾಜ್ಯ ರಾಷ್ಟ್ರಗಳಿಗೆ ಕ್ಷೇಮ ಸೌಖ್ಯ ಗಳು ಉಂಟಾಗಲಿ ಸನಾತನ ಧರ್ಮದ ಏಳಿಗೆ ಆಗಲಿ ಎಂಬುದಾಗಿ ಹರಸಿದರು.