ಹುಬ್ಬಳ್ಳಿ: ನಗರದ ಹಳೆಯ ಕೋರ್ಟ್ ವೃತ್ತದಲ್ಲಿ ಮೇಲ್ಸೇತುವೆ ಕಾಮಗಾರಿ ವೇಳೆ ಕಬ್ಬಿಣದ ರಾಡ್ ಬಿದ್ದು ಎಎಸ್‌ಐ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿ ಗುತ್ತಿಗೆದಾರ ಕಂಪನಿಯ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಝಂಡು ಕನ್ಸ್‌ಟ್ರಕ್ಷನ್ಸ್ ಕಂಪನಿಯ ನೌಕರರಾದ ಸುಪರ್‌ವೈಸರ್ ಹರ್ಷಾ ಹೊಸಗಾಣಿಗೇರ, ಲೈಜನಿಂಗ್ ಇಂಜಿನಿಯರ್ ಜಿತೇಂದ್ರಪಾಲ್ ಶರ್ಮಾ, ಇಂಜಿನಿಯರ್ ಭೂಪೇಂದರ್ ಪಾಲ್, ಕ್ರೇನ್ ಚಾಲಕ ಅಸ್ಲಂ ಅಲಿ, ನೌಕರರಾದ ಮೊಹಮ್ಮದ್ ಇಮಾದರೂ, ಮೊಹಮ್ಮದ್ ಮಸೂದರ ರೆಹ್ಮಾನ್, ಸಬೀಬ ಶೇಖ್, ಆರಿಫ್, ಶಮೀಮ ಶೇಖ್, ರಿಜಾವುಲ್ ಹಕ್, ಲೇಬರ್ ಕಾಂಟ್ರಾಕ್ಟರ್ ಮೊಹಮ್ಮದ್ ರಬಿವುಲ್ ಹಕ್ ಬಂಧಿತರು.
ಸೆ.10ರಂದು ಕರ್ತವ್ಯಕ್ಕೆಂದು ಬೈಕಿನಲ್ಲಿ ತೆರಳುತ್ತಿದ್ದ ಉಪನಗರ ಠಾಣೆಯ ಎಎಸ್‌ಐ, ಧಾರವಾಡ ರಾರಾಜಿನಗರ ನಿವಾಸಿ ನಾಬಿರಾಜ ಜಯಪಾಲ ದಯಣ್ಣವರ ಅವರ ತಲೆಯ ಮೇಲೆ ಕಬ್ಬಿಣದ ರಾಡ್ ಬಿದ್ದು ಗಂಭೀರ ಗಾಯಗಳಾಗಿದ್ದವು. ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.