ರಾಯಚೂರು: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ತೀವ್ರ ಚರ್ಚೆಯಲ್ಲಿರುವಾಗಲೇ, ಮಗಳಿಗೆ ನಿತ್ಯ ಪೀಡಿಸುತ್ತಿದ್ದಾತನಿಂದ ರಕ್ಷಿಸಲು ಆಕೆಯನ್ನು ಬೇರೆ ಮನೆಯಲ್ಲಿರಿಸಿದ್ದಕ್ಕೆ ಹೆತ್ತವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರಿನ ಸಿಂಧನೂರು ತಾಲೂಕಿನ ಆರ್.ಎಚ್. ಕ್ಯಾಂಪ್ 3ರಲ್ಲಿ ಈ ಘಟನೆ ನಡೆದಿದೆ. ಯುವಕನ ಕಾಟ ತಪ್ಪಿಸಲು ಮಗಳನ್ನು ಬೇರೆ ಊರಿನಲ್ಲಿ ಸಂಬಂಧಿಕರ ಮನೆಯಲ್ಲಿ ಇರಿಸಿದ್ದಕ್ಕೆ ಪ್ರಣವ್ ಮತ್ತು ಆತನ ಸಹಚರರು ಯುವತಿಯ ತಂದೆ, ತಾಯಿ, ಸಂಬಂಧಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಯುವತಿ ತಂದೆ ಹೀರಾ ಮಹಾನ್, ತಾಯಿ ಶೃತಿ ಮಂಡಲ್, ಸಹೋದರ ಹಿಮಂತು, ಸಂಬಂಧಿ ಶುಬ್ರತೊ ಮೇಲೆ ಹಲ್ಲೆ ನಡೆಸಲಾಗಿದೆ. ಯುವತಿಯ ತಂದೆಯ ಕಾಲು ಮುರಿದಿದ್ದು, ಕಣ್ಣಿಗೆ ಗಂಭೀರ ಗಾಯವಾಗಿದೆ. ತಾಯಿಯ ಸೀರೆ ಎಳೆದಾಡಿ ಅಮಾನವೀಯವಾಗಿ ವರ್ತಿಸಲಾಗಿದೆ. ಆರೋಪಿ ಪ್ರಣವ್ ನ ಕಿರುಕುಳಕ್ಕೆ ರೋಸಿಹೋದ ಹೆತ್ತವರು ತಮ್ಮ ಮಗಳನ್ನು ಬೇರೆ ಮನೆಯಲ್ಲಿರಿಸಿದ್ದರು. ಗಾಯಗೊಂಡಿರುವ ಯುವತಿಯ ತಂದೆ ಸಿಂಧನೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪ್ರಣವ್ ಬಿಸ್ವಾಸ್, ಪಿಯೂಸ್ ಬಿಸ್ವಾಸ್, ಮಧು ಬಿಸ್ವಾಸ್ ಮುಂತಾದವರ ವಿರುದ್ಧ ಪ್ರಕರಣ ದಾಖಲಾಗಿದೆ.