ಮುಲ್ಕಿ : ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಎಸ್. ಕೋಡಿ ಇವರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವು ಪದ್ಮಾವತಿ ಲಾನ್ ಎಸ್ ಕೋಡಿಯಲ್ಲಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜೀವಿ ವಿ ಸುವರ್ಣ ರವರು ನೆರವೇರಿಸಿ, ತುಳುವರ 12 ತಿಂಗಳುಗಳಲ್ಲಿ ಆಟಿ ತಿಂಗಳು ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಮುಂದಿನ ಪೀಳಿಗೆಗೆ ಈ ವಿಚಾರದಲ್ಲಿ ಮಾಹಿತಿಯನ್ನು ನೀಡುವುದು ಅತೀ ಅಗತ್ಯ. ಮಾತ್ರವಲ್ಲ ಈ ತಿಂಗಳಿನಲ್ಲಿ ತುಳುನಾಡಿನಲ್ಲಿ ಮಾಡುವ ತಿಂಡಿ ತಿನಿಸುಗಳಲ್ಲಿ ಆರೋಗ್ಯದ ಗುಟ್ಟು ಅಡಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಗುರುರಾಜ್ ಎಸ್ ಪೂಜಾರಿಯವರು ಇಂದಿನ ಮಕ್ಕಳು ಮೊಬೈಲ್ ನಲ್ಲಿ ಹೆಚ್ಚು ಸಮಯವನ್ನು ವ್ಯರ್ಥ ಮಾಡುತ್ತಿರುತ್ತಾರೆ.
ಅಂತಹ ಮಕ್ಕಳಿಗೆ ಈ ಕಾರ್ಯಕ್ರಮದ ಅಗತ್ಯತೆ ತುಂಬಾ ಇದೆ ಎಂಬ ಅಭಿಪ್ರಾಯವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ನವೀನ್ ಹರಿಪಾದೆಯವರು ಆಟಿ ತಿಂಗಳಲ್ಲಿ ನಡೆಯುವ ವಿವಿಧ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ಯುವ ವೇದಿಕೆಯ ಅಧ್ಯಕ್ಷರಾದ ಪವನ್ ಕುಮಾರ್ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆಯ ಅಧ್ಯಕ್ಷರಾದ ಶಾಂತ ಕರ್ಕೇರ ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಒಟ್ಟು 30 ಬಗೆಯ ತುಳುನಾಡಿನ ಪಾರಂಪರಿಕ ತಿಂಡಿ ತಿನಿಸುಗಳನ್ನು ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಆಟಿ ತಿಂಗಳಿಗೆ ಸಂಬಂಧಿಸಿದ ರಸಪ್ರಶ್ನೆ ಹಾಗೂ ಗಾದೆ ಮಾತುಗಳನ್ನು ನೆರವೇರಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಪ್ರಮೀಳಾ ಡಿ ಸುವರ್ಣರವರು ಸ್ವಾಗತಿಸಿ, ಸುನಿತಾ ಗುರುರಾಜ್ ವಂದಿಸಿ, ಬಬಿತಾ ಜೆ ಸುವರ್ಣರವರು ನಿರೂಪಿಸಿದರು .