ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ದೈವ ನರ್ತಕ ಸಮುದಾಯದ ವಿರುದ್ಧ ತಪ್ಪು ಸಂದೇಶ ನೀಡುತ್ತಿರುವ ಹಾಗೂ ಅಶ್ಲೀಲವಾಗಿ ನಿಂದಿಸುತ್ತಿರುವವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಎಫ್ಐಆರ್ ದಾಖಲಿಸುವಂತೆ ಪಾಣಾರ ಯಾನೆ ನಲಿಕೆ ಸಮಾಜ ಸೇವಾ ಸಂಘ, ಮಂಗಳೂರು ತಾಲ್ಲೂಕು ಘಟಕದ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಗೆ ದೂರು ನೀಡಲಾಗಿದೆ.
ಕಲ್ಜಿಗ ಎಂಬ ಸಿನೇಮಾದಲ್ಲಿರುವ ದೈವ ಕೋಲದ ದೃಶ್ಯಗಳನ್ನು ನಲಿಕೆ ಸಮುದಾಯವರು ಮಾಡಿದ್ದಾರೆ ಎಂದು ಚಿತ್ರ ತಂಡ ಸುಳ್ಳು ಹೇಳಿರುವುದನ್ನು ಖಂಡಿಸಿ ಹಾಗೂ ದೈವ ನರ್ತಕರನ್ನು ಕಮೆಂಟ್ ಮೂಲಕ ಅಶ್ಲೀಲವಾಗಿ ನಿಂದಿಸಿದ ವ್ಯಕ್ತಿಯ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಮಂಗಳೂರು ತಾಲ್ಲೂಕು ಪಾಣಾರ ಯಾನೆ ನಲಿಕೆ ಸಮಾಜ ಸೇವಾ ಸಂಘ (ರಿ) ದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ.
ಕಲ್ಜಿಗ ಎಂಬ ತುಳು ಸಿನೆಮಾದವರು ಕೊರಗಜ್ಜನ ಪಾತ್ರವನ್ನು ರಕ್ಷಿತ್ ಜೋಗಿ ಎಂಬವರಲ್ಲಿ ಮಾಡಿಸಿ, ಸುದ್ದಿಗೋಷ್ಠಿಯಲ್ಲಿ ನಲಿಕೆ ಸಮುದಾಯದವರೇ ಕೊರಗಜ್ಜನ ಪಾತ್ರವನ್ನು ಮಾಡಿದರೆಂದು ಸುಳ್ಳು ಸುದ್ದಿ ಹರಡಿಸಿ ನಮ್ಮ ಜಾತಿಗೆ ಅವಮಾನ ಮಾಡಿದ್ದಾರೆ. ಅಲ್ಲದೆ ಸೆ.19ರಂದು ಬೊಂಬಾಟ್ ಸಿನೆಮಾ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸುದ್ದಿಗೋಷ್ಠಿ ಪ್ರಸಾರವಾಗಿದ್ದು ಈ ವಿಡಿಯೋಗೆ @nishanthPoojary-U6q ಎಂಬ ಹೆಸರಿನಲ್ಲಿ ಕಮೆಂಟ್ ಮಾಡಿ ದೈವನರ್ತಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ದೈವ ನರ್ತಕ ಸಮುದಾಯದ ವಿರುದ್ಧ ತುಚ್ಚವಾಗಿ ಬರೆದಿದ್ದಾನೆ ಎಂದು ಸಮಿತಿಯ ದೂರಿನಲ್ಲಿ ಆಪಾದಿಸಲಾಗಿದೆ. ಈ ವೇಳೆ ಪಾಣಾರ ಯಾನೆ ನಲಿಕೆ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಸಮುದಾಯದ ವಿರುದ್ಧ ವ್ಯಕ್ತಿಯಿಂದ ಅವಾಚ್ಯ ನಿಂದನೆ: ದಲಿತ ದೌರ್ಜನ್ಯ ಕಾನೂನಿನಡಿ ಕೇಸು ದಾಖಲಿಸಲು ನಲಿಕೆ ಸಂಘದಿಂದ ಡೀಸಿ, ಕಮಿಷನರ್‌ಗೆ ದೂರು
RELATED ARTICLES