ಬೆಂಗಳೂರು : ದಂಪತಿ ಮತ್ತು ಅವರ ಮೂರು ವರ್ಷದ ಮಗಳು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದ್ವಿಚಕ್ರ ವಾಹನ ಸವಾರನೊಬ್ಬ ದಾಳಿ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಓವರ್ ಟೇಕ್ ಮಾಡಲು ಜಾಗ ಬಿಡಲಿಲ್ಲವೆಂದು ರೊಚ್ಚಿಗೆದ್ದ ಬೈಕ್ ಸವಾರ ಏಕಾಏಕಿ ಕಾರು ಚಾಲಕನ ಮೇಲೆ ದಾಳಿ ನಡೆಸಿದ್ದಾನೆ. ಘಟನೆ ಸಂಬಂಧ ಕಾರು ಮಾಲೀಕ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೇರಳ ಮೂಲದ ಐಟಿ ವೃತ್ತಿಪರ ಅಖಿಲ್ ಸಾಬು ಎಂಬುವವರು ತಮ್ಮ ಪತ್ನಿ ಹಾಗೂ ಮೂರು ವರ್ಷದ ಮಗಳ ಜೊತೆ ಸರ್ಜಾಪುರ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಈ ಘಟನೆ ಸಂಭವಿಸಿದೆ. ಇನ್ನು ಘಟನೆಯಲ್ಲಿ ಬೈಕ್ ಚಾಲಕ ಕಾರಿನ ಗ್ಲಾಸ್ ಒಡೆದು ಹಾಕಿದ್ದು ಕಾರಿನೊಳಗಿದ್ದ ಮಗಳಿಗೆ ಗಾಯಗಳಾಗಿವೆ ಎಂದು ಅಖಿಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಸ್ಥಳೀಯ ನಿವಾಸಿ ಜಗದೀಶ್ ಎಂದು ಗುರುತಿಸಲಾಗಿದೆ.
ಕಾರಿನ ಹಿಂಬದಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಜಗದೀಶ್ ಓವರ್ ಟೇಕ್ ಮಾಡಲು ಕಾರು ಅಡ್ಡ ಬರುತ್ತಿದೆ ಎಂದು ಹೇಳಿ ಕಾರನ್ನು ಅಡ್ಡಗಟ್ಟಿ ತನ್ನ ಹೆಲ್ಮೆಟ್‌ನಿಂದ ಕಾರಿನ ಗಾಜಿಗೆ ಒಡೆದಿದ್ದಾನೆ. ಈ ವೇಳೆ ನಡು ರಸ್ತೆಯಲ್ಲಿ ಕಾರು ಚಾಲಕ ಮತ್ತು ಬೈಕ್ ಚಾಲಕರಿಬ್ಬರು ಬಡಿದಾಡಿಕೊಂಡಿದ್ದಾರೆ.
ಘಟನೆಯಲ್ಲಿ ಕಾರು ಚಾಲಕನ ಕಣ್ಣು, ಮೂಗು, ಕೆನ್ನೆಗೆ ಗಾಯವಾಗಿದೆ. ಅಷ್ಟೆ ಅಲ್ಲದೇ ದ್ವಿಚಕ್ರ ವಾಹನ ಸವಾರ ತನ್ನ ಹೆಲ್ಮೆಟ್‌ನಿಂದ ಕಾರಿನ ಗಾಜು ಹೊಡೆದಿದ್ದರಿಂದ ಕಾರಿನಲ್ಲಿದ್ದ 3 ವರ್ಷದ ಮಗುವಿಗೆ ಕೈಗೆ ಗಾಯವಾಗಿದೆ.