ಯಲ್ಲಾಪುರ: ಅಪಹರಣಕಾರರನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದು, ಈ ವೇಳೆ ಪೊಲೀಸರು ಅವರ ಕಾಲಿಗೆ ಗುಂಡು ಹೊಡೆದು ಬಂಧಿಸಿರುವ ಘಟನೆ ಶನಿವಾರ ಬೆಳಗಿನ ಜಾವ ಯಲ್ಲಾಪುರ-ಹಳಿಯಾಳ ರಸ್ತೆಯಲ್ಲಿ ನಡೆದಿದೆ.
ಮುಂಡಗೋಡ ಮೂಲದ ಉದ್ಯಮಿಯೊಬ್ಬರ ಅಪಹರಣದಲ್ಲಿ ಭಾಗಿಯಾಗಿದ್ದ ಐದು ದುಷ್ಕರ್ಮಿಗಳ ಗುಂಪನ್ನು ಜ. 11ರಂದು ಬೆಳಗ್ಗಿನ ಜಾವ ಮುಂಡಗೋಡ ಪೊಲೀಸರು ಬೆನ್ನಟ್ಟಿದಾಗ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮುಂಡಗೋಡ ಸಿಪಿಐ ರಂಗನಾಥ್ ಮತ್ತು ಪಿಎಸ್ಐ ಪರಶುರಾಮ್ ಸೇರಿದಂತೆ ಮೂವರು ಪೊಲೀಸರು ಗಾಯಗೊಂಡಿದ್ದು, ಇಬ್ಬರು ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಲಾಗಿದೆ.
ದುಷ್ಕರ್ಮಿಗಳು ಉದ್ಯಮಿಯನ್ನು ಅಪಹರಿಸಿ 30 ಲಕ್ಷ ರೂ. ಸುಲಿಗೆಗೆ ಬೇಡಿಕೆ ಇಟ್ಟಿದ್ದರು. ಆದರೆ, 18 ಲಕ್ಷ ರೂ. ಪಡೆದ ನಂತರ ಉದ್ದಮಿಯನ್ನು ಬಿಡುಗಡೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಂಡಗೋಡ ಪೊಲೀಸರು ಶುಕ್ರವಾರ ನಾಲ್ವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಜನ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.