ಬಾಗಲಕೋಟೆ: ಹೊಲದಲ್ಲಿ ಉಳುಮೆ ಮಾಡಿ ಹೊಲದ ಶೆಡ್ ನಲ್ಲಿ ಮಲಗಿದ್ದ ಕುಟುಂಬದ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಹೊಲದಲ್ಲಿದ್ದ ಶೆಡ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದ್ದು, ಘಟನೆಯಲ್ಲಿ ಇಬ್ಬರು ಜೀವಂತ ದಹನವಾಗಿದ್ದಾರೆ. ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೆಳಗಲಿಯಲ್ಲಿ ಈ ದುರ್ಘಟನೆ ನಡೆದಿದೆ. ಮಹಾಲಿಂಗಪುರ ಮೂಲದ ದಸ್ತಗೀರ ಸಾಬ ಮೌಲಾಸಾಬ್ ಪೆಂಡಾರಿ ಎಂಬವರ ಶೆಡ್ ಮನೆ ಮೇಲೆ ದುಷ್ಕರ್ಮಿಗಳು ಈ ದಾಳಿ ನಡೆಸಿದ್ದಾರೆ. ಉಳುಮೆ ಮಾಡಿದ ಬಳಿಕ ರಾತ್ರಿ ಕುಟುಂಬದ ಐವರು ಹೊಲದ ಶೆಡ್ ನಲ್ಲಿ ಮಲಗಿದ್ದರು. ಶೆಡ್ ಮೇಲೆ ಪೆಟ್ರೋಲ್ ಸುರಿಯಲಾಗಿದೆ. 100 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಗೆ ಪೆಟ್ರೋಲ್ ಹಾಕಿ 2 ಎಚ್ ಪಿ ಪಂಪ್ ಮೂಲಕ ಪೆಟ್ರೋಲ್ ಶೆಡ್ ಗೆ ಸುರಿಯಲಾಗಿದೆ. ಶೆಡ್ ನ ಹೊರಗಡೆಯಿಂದ ಬೀಗ ಹಾಕಿ ಬೆಂಕಿ ಹಚ್ಚಲಾಗಿದೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಜಿಲ್ಲೆಯ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ದಸ್ತಗೀರ ಸಾಬ ಮೌಲಾಸಾಬ್ ಪೆಂಡಾರಿ ಕುಟುಂಬ ಎರಡೂವರೆ ಎಕರೆ ಹೊಲದಲ್ಲಿ ಉಳುಮೆ ಮಾಡಿಕೊಂಡಿದ್ದರು. ತಡರಾತ್ರಿ ಶೆಡ್ ನಲ್ಲಿ ಮಲಗಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಎಚ್ಚರಗೊಂಡ ಮೂವರು ಮನೆಯಿಂದ ಹೊರಗೆ ಓಡೋಡಿ ಬಂದಿದ್ದಾರೆ. ಆದರೆ ಇನ್ನಿಬ್ಬರನ್ನು ಪಾರು ಮಾಡುವ ಹೊತ್ತಿಗೆ ಬೆಂಕಿ ಆವರಿಸಿಬಿಟ್ಟಿತ್ತು. ಮಗಳು ಶಬಾನಾ ಪೆಂಡಾರಿ (26), ಜಯನಬಿ ಪೆಂಡಾರಿ ಪತ್ನಿ (50) ಮೃತ ದುರ್ದೈವಿಗಳು. ದಸ್ತಗೀರ್, ಸುಭಾನಾ, ಸಿದ್ದಿಕ್ ಎಂಬುವವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

