ವಾಷಿಂಗ್ಟನ್: ಅಮೆರಿಕದಲ್ಲಿ ಹಿಂದೂಗಳು ಮತ್ತು ಹಿಂದೂ ಧರ್ಮದ ವಿರುದ್ಧದ ದಾಳಿಗಳು ಗಣನೀಯವಾಗಿ ಹೆಚ್ಚಾಗುತ್ತಿವೆ ಎಂದು ಭಾರತೀಯ ಅಮೆರಿಕನ್ ಸೆನೆಟರ್ಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕನ್ ಸೆನೆಟರ್ ಥಾನೇದಾರ್, ಈ ನಡುವೆ ಅಮೆರಿಕದಲ್ಲಿ ಹಿಂದೂ ಧರ್ಮದವರ ಮೇಲೆ ಗಣನೀಯ ಪ್ರಮಾಣದಲ್ಲಿ ದಾಳಿಗಳು ನಡೆಯುತ್ತಿರುವುದನ್ನು ನೋಡಿದರೆ, ಇದು ಸಂಘಟಿತ ಹಿಂದೂ ವಿರೋಧಿ ದಾಳಿಯಾಗಿದೆ ಎಂದು ಶಂಕೆ ವ್ಯಕ್ತವಾಗುತ್ತಿದೆ.
ಹಿಂದೂಗಳ ವಿರುದ್ಧ ಆನ್‌ಲೈನ್ ಸೇರಿದಂತೆ ಮತ್ತಿತರೆಡೆ ತಪ್ಪು ಮಾಹಿತಿ ಪ್ರಸಾರ ಮಾಡಲಾಗುತ್ತಿದೆ ಎಂದು ದೂರಿದರು. ಥಾನೇದಾರ್ ಸೇರಿದಂತೆ ಇತರ ನಾಲ್ವರು ಭಾರತೀಯ ಅಮೆರಿಕನ್ ಸೆನೆಟರ್‌ಗಳಾದ ರೋ ಖನ್ನಾ, ರಾಜಾ ಕೃಷ್ಣಮೂರ್ತಿ, ಅಮಿ ಬೇರಾ ಮತ್ತು ಪ್ರಮೀಳಾ ಜಯಪಾಲ್ ಇತ್ತೀಚೆಗೆ ಹಿಂದೂ ದೇವಾಲಯಗಳು ಮತ್ತು ಪೂಜಾ ಸ್ಥಳಗಳ ಮೇಲಿನ ದಾಳಿಗಳ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಂಗ ಇಲಾಖೆಗೆ ಪತ್ರ ಬರೆದಿದ್ದರು.
ದಾಳಿ ನಡೆಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಯಾರನ್ನೂ ಬಂಧಿಸಿಲ್ಲ. ಇದು ಮುಂದಿನ ದಿನಗಳಲ್ಲಿ ದಾಳಿ ಹೆಚ್ಚಾಗಲು ಕಾರಣವಾಗುತ್ತದೆ. ಸಮುದಾಯದ ವಿರುದ್ಧ ಅತ್ಯಂತ ಸಂಘಟಿತವಾಗಿ ನಡೆಯುತ್ತಿರುವ ದುಷ್ಕೃತ್ಯವಾಗಿದೆ. ಹಿಂದೂ ಸಮುದಾಯ ಒಟ್ಟಾಗಿ ನಿಲ್ಲಬೇಕಾದ ಕಾಲ ಬಂದಿದೆ. ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದು ಥಾನೇದಾರ್ ಹೇಳಿದರು.
ಹಿಂದೂ ಧರ್ಮವನ್ನು ಆಚರಿಸಿ, ಹಿಂದೂ ಮನೆಯಲ್ಲಿ ಹಿಂದೂವಾಗಿ ಬೆಳೆದ ನನಗೆ ಹಿಂದೂ ಧರ್ಮ ಏನು ಎಂಬ ಅರಿವಿದೆ. ನಮ್ಮ ಧರ್ಮ ಅತ್ಯಂತ ಶಾಂತಿ ಪ್ರಿಯ ಧರ್ಮವಾಗಿದೆ. ಇತರರ ಮೇಲೆ ದಬ್ಬಾಳಿಕೆಗೆ ಆಸ್ಪದ ನೀಡುವುದಿಲ್ಲ ಎಂದರು. ಆದಾಗ್ಯೂ, ಈ ಸಮುದಾಯವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ದಾಳಿ ಮಾಡಲಾಗುತ್ತಿದೆ. ಹಿಂದೂ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ವಿರುದ್ಧ ಕ್ರಮಕ್ಕೆ ಸೂಚಿಸಿದ ಬಳಿಕವೂ ದಾಳಿಗಳು ಹೆಚ್ಚುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.