ಗುಂಡ್ಲುಪೇಟೆ: ಆನೆ ಮರಿಯೊಂದರ ಮೇಲೆ ಹುಲಿ ದಾಳಿ ಮಾಡಿದ ಪರಿಣಾಮ ಆನೆ ಮರಿ ನಡುರಸ್ತೆಯಲ್ಲೇ ಸಾವನ್ನಪ್ಪಿರುವ ಘಟನೆ ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿ ನಡೆದಿದೆ. ಬಂಡೀಪುರ-ಊಟಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಆನೆ ಮರಿ ಮೇಲೆ ಹುಲಿ ಏಕಾಏಕಿ ದಾಳಿ ಮಾಡಿದೆ. ಆನೆ ಮರಿ ಮೇವು ಮೇಯುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಕೂಗಳತೆ ದೂರದಲ್ಲಿದ್ದ ತಾಯಿ ಆನೆ ಧಾವಿಸುವಷ್ಟರಲ್ಲಿ ಹುಲಿ ಮರಿ ಆನೆಯನ್ನು ಕೊಂದಿದೆ. ತಾಯಿ ಆನೆ ಬರುವುದನ್ನು ಗಮನಿಸಿ ಹುಲಿ ಸ್ಥಳದಿಂದ ಓಡಿ ಹೋಗಿದೆ ಎನ್ನಲಾಗಿದೆ. ಮರಿ ಆನೆ ಮೃತದೇಹದ ಮುಂದೆ ತಾಯಿ ಆನೆ ರೋಧಿಸುತ್ತಿದೆ. ರಸ್ತೆ ಬದಿಯಲ್ಲೇ ತಾಯಿ ಆನೆ ಮರಿ ಆನೆಯ ಮೃತದೇಹವಿಟ್ಟು ನಿಂತಿರುವುದರಿಂದ ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಆತಂಕಿತರಾಗಿದ್ದಾರೆ. ತಾಯಿ ಆನೆ ದಾಳಿ ಮಾಡಬಹುದೆಂಬ ಆತಂಕದಿಂದ ವಾಹನಗಳು ಸಂಚರಿಸದೆ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿವೆ. ಹೀಗಾಗಿ ಕಿ.ಮೀ.ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿವೆ. ಮೃತ ಆನೆ ಮರಿ ಹಾಗೂ ತಾಯಿ ಆನೆಯನ್ನು ತೆರವುಗೊಳಿಸಲು ಅರಣ್ಯ ಅಧಿಕಾರಿಗಳು ಮುಂದಾಗಿದ್ದಾರೆ.