Saturday, April 26, 2025
Homeಅಂತಾರಾಷ್ಟ್ರೀಯಬಹರೈನ್: ಪಿಲಿಗೊಬ್ಬು ತಂಡದ ವತಿಯಿಂದ ನಡೆದ ಶ್ರೀ ಸತ್ಯನಾರಾಯಣ ಪೂಜೆ ಸಂಪನ್ನ

ಬಹರೈನ್: ಪಿಲಿಗೊಬ್ಬು ತಂಡದ ವತಿಯಿಂದ ನಡೆದ ಶ್ರೀ ಸತ್ಯನಾರಾಯಣ ಪೂಜೆ ಸಂಪನ್ನ

ಬಹರೈನ್ ನಲ್ಲಿ ಕಳೆದ ವರುಷವಷ್ಟೇ ಸ್ಥಾಪನೆಗೊಂಡ ಪಿಲಿಗೊಬ್ಬು ತಂಡವು ಇದೇ ಫೆಬ್ರವರಿ 7, 2025 ರಂದು, ಕನ್ನಡ ಭವನದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಿತ್ತು. ಪಿಲಿಗೊಬ್ಬು ತಂಡದ ಪಾಲಿಗೆ ಇದೊಂದು ಮಹತ್ವದ ಮೈಲಿಗಲ್ಲು. ಈ ಪಿಲಿಗೊಬ್ಬು ಸಂಘಟನೆ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿದ ನಂತರ ಇಂತಹಾ ಪೂಜಾವಿಧಿಯೊಂದನ್ನು ಪ್ರಪ್ರಥಮ ಬಾರಿಗೆ ಸಂಘಟಿಸಿದ್ದು ಬಹರೈನ್ ನಲ್ಲಿರುವ ಕನ್ನಡಿಗ ಹಾಗೂ ತುಳುವರು ದೊಡ್ಡ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದ್ದರು. ಪೂಜೆಯಲ್ಲಿ ಹಾಜರಿದ್ದ ನೂರಾರು ಭಕ್ತರು ಕಾರ್ಯಕ್ರಮಕ್ಕೆ ತಮ್ಮ ವಿವಿಧ ಸಹಕಾರಗಳನ್ನು ನೀಡಿದ್ದರಲ್ಲದೆ, ಸತ್ಯನಾರಾಯಣ ಪೂಜೆಯಂತಹಾ ಧಾರ್ಮಿಕ ಚಟುವಟಿಕೆಯನ್ನು ಪಿಲಿಗೊಬ್ಬು ತಂಡ ಹಮ್ಮಿಕೊಂಡ ಕಾರಣಕ್ಕಾಗಿ ಸಂಘಟನೆಯ ರೂವಾರಿಗಳನ್ನು ಅಭಿನಂದಿಸಿದರು.

ಸಮಾನ ಮನಸ್ಕ ಯುವಕರ ತಂಡ “ಪಿಲಿ ಗೊಬ್ಬು”, ತುಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಹರೈನ್ ದೇಶದಲ್ಲಿ ಹುಲಿವೇಷ ಪ್ರದರ್ಶನದ ಮೂಲಕ ಪ್ರಚುರಪಡಿಸಿ, ಸಂರಕ್ಷಿಸಲು ಮತ್ತು ನಮ್ಮ ಮುಂದಿನ ಜನಾಂಗಕ್ಕೆ ನಮ್ಮ ಪರಂಪರೆಯನ್ನು ಪರಿಚಯಿಸಲು ತಮ್ಮನ್ನು ಸಮರ್ಪಿಸಿಕೊಂಡಿದೆ. ತಂಡದ ಯುವಕರ ದೃಷ್ಟಿಕೋನವು ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡುವುದಷ್ಟೇ ಅಲ್ಲ, ಹೆಚ್ಚು ಹೆಚ್ಚು ಯುವಕರನ್ನು ಈ ಸಂಘಟನೆಯತ್ತ ಆಕರ್ಷಿಸಿ, ಆ ಮೂಲಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಕಾರ್ಯಕ್ರಮಗಳ ಆಯೋಜನೆ, ಸಮಾಜ ಮುಖೀ ಚಿಂತನೆಗಳೊಂದಿಗೆ ರಕ್ತದಾನ ಶಿಬಿರಗಳ ಸಂಘಟನೆ, ಕ್ರೀಡೆ, ದತ್ತಿ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶಗಳನ್ನೂ ಹೊಂದಿದೆ. ದ್ವೀಪದ ಕನ್ನಡ ತುಳು ಸಮುದಾಯಕ್ಕೆ ತನ್ನಿಂದಾದ ಸೇವಾ ಕಾರ್ಯಗಳನ್ನು ಮಾಡುವ ಇಚ್ಚೆಯೂ ಈ ಪಿಲಿಗೊಬ್ಬು ತಂಡಕ್ಕಿದೆ.

ಪ್ರತಿ 144 ವರ್ಷಗಳಿಗೊಮ್ಮೆ ನಡೆಯುವ ಅಪರೂಪದ ಘಟನೆಯಾದ ಮಹಾ ಕುಂಭದಿಂದ ವಿಶೇಷವಾಗಿ ತಂದ ಗಂಗಾಜಲವು ಈ ಪೂಜಾ ಕಾರ್ಯಕ್ರಮದ ಮಹತ್ವವನ್ನು ಹೆಚ್ಚಿಸಿತ್ತು. ವಸಂತ ಪಂಚಮಿಯಂದು ತ್ರಿವೇಣಿ ಸಂಗಮದಿಂದ ಸಂಗ್ರಹಿಸಿದ ಈ ಪವಿತ್ರ ಜಲವನ್ನು ಎಲ್ಲಾ ಭಕ್ತರಿಗೆ ವಿತರಿಸಲಾಯಿತು, ಇದು ಪೂಜೆಯ ಆಧ್ಯಾತ್ಮಿಕ ಮಹತ್ವವನ್ನು ಹೆಚ್ಚಿಸಿತು.

ಬಹರೈನ್ ನಲ್ಲಿ ನೆಲೆಸಿರುವ ಹಿರಿಯ ಕನ್ನಡಿಗ ಶ್ರೀ ಸುಭಾಶ್ಚಂದ್ರರು ತಮ್ಮ ಅನ್ನದಾನ ಸೇವೆಯ ಮೂಲಕ ಸತ್ಯನಾರಾಯಣ ಪೂಜೆಯ ಕಾರ್ಯಕ್ರಮಕ್ಕೆ ತಮ್ಮ ಸಹಕಾರ ನೀಡಿದರು. ಬಹರೈನ್ ನ ವಿವಿಧ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಿಂದ ಪೂಜಾ ಕಾರ್ಯಕ್ರಮಕ್ಕೆ ಇನ್ನಷ್ಟು ಕಳೆ ಬಂದಿತ್ತು. ನಾವೆಲ್ಲರೂ ಒಂದು ಎಂಬ ಭಾವನೆಯಿಂದ ಪಾಲ್ಗೊಂಡಿದ್ದ ಕನ್ನಡಿಗರ ಹಾಗೂ ತುಳುವರ ಉಪಸ್ಥಿತಿ ಅವರ ಆಳವಾದ ಏಕತೆ ಮತ್ತು ಸಮುದಾಯದ ಭಾವನೆಯನ್ನು ಬೆಳೆಸಿತು. ಕಾರ್ಯಕ್ರಮದಲ್ಲಿ “ಪಿಲಿಗೊಬ್ಬು ತಂಡ” ಸಂಘಟನೆಯ ರಚನೆ, ಅದರ ಧ್ಯೇಯ ಮತ್ತು ಭವಿಷ್ಯಕ್ಕಾಗಿ ಯೋಜಿಸಲಾದ ವಿವಿಧ ಉಪಕ್ರಮಗಳ ಕುರಿತು ಅಂದು ಭಾಗವಹಿಸಿದವರಿಗೆ ವಿವರಿಸಲಾಯಿತು. ಮಂಗಳೂರಿನಿಂದ ಬಂದಿದ್ದ ಶ್ರೀ ಪ್ರಶಾಂತ್ ಭಟ್ ರವರು ಸತ್ಯನಾರಾಯಣ ಪೂಜೆಯನ್ನು ನೆರವೇರಿಸಿ ಕೊಟ್ಟಿದ್ದರು.

RELATED ARTICLES
- Advertisment -
Google search engine

Most Popular