ಬಹರೇನ್: ಇತ್ತೀಚಿನ ಕೆಲವು ವರ್ಷಗಳಿಂದ ತುಳುನಾಡಿನಲ್ಲಿ ಜನಪ್ರಿಯವಾಗಿರುವ ʻಆಟಿಡ್ ಒಂಜಿ ದಿನʼ ಕಾರ್ಯಕ್ರಮಗಳಿಂದ ಪ್ರೇರಿತವಾಗಿ ಆ.9ರಂದು ಬಹ್ರೇನ್‌ನಲ್ಲಿ ಅಲ್ಲಿನ ತುಳುಕೂಟದ ವತಿಯಿಂದ ʻಆಟಿದ ಒಂಜಿ ದಿನʼ ಕಾರ್ಯಕ್ರಮ ನಡೆಯಲಿದೆ. ಬಹ್ರೇನ್‌ನಲ್ಲಿ ಕಳೆದ ನಾಲ್ಕು ದಶಕಗಳಿಂದ ಕನ್ನಡ ಹಾಗೂ ತುಳು ಕಾರ್ಯಕ್ರಮಗಳನ್ನು ಸಂಘಟಿಸಿಕೊಂಡು ಬರುತ್ತಿರುವ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಜ್‌ಕುಮಾರ್, ಬಹ್ರೇನ್‌ನ ಹಿರಿಯ ತುಳುವರಾದ ಆಸ್ಟಿನ್ ಸಂತೋಷ್, ರಾಜೇಶ್ ಶೆಟ್ಟಿ, ವಿಜಯ್ ಅವರ ಮುಂದಾಳುತ್ವದಲ್ಲಿ ಈ ಕಾರ್ಯಕ್ರಮ ಮೂಡಿಬರಲಿದೆ. ತುಳುಕೂಟ ಬಹ್ರೇನ್ ಸಹಕಾರದಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ.
ಬಹ್ರೇನ್‌ನಲ್ಲಿ ನೆಲೆಸಿರುವ ತುಳುವರಿಗೆ ಆಟಿ ತಿಂಗಳ ವಿಶೇಷತೆ ತಿಳಿಸುವುದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬಹ್ರೇನ್‌ನ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಅಂದು ತುಳುನಾಡಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಂಪ್ರದಾಯಿಕ ಆಟಗಳು ಮೇಳೈಸಲಿವೆ. ಸುಮಾರು ಒಂದೂವರೆ ಸಾವಿರ ತುಳುವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಈ ಕಾರ್ಯಕ್ರಮಕ್ಕಾಗಿಯೇ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುಲ್ಕಿಯ ಚಂದ್ರಶೇಖರ ಸುವರ್ಣ ಹಾಗೂ ಖ್ಯಾತ ತುಳು ವಾಗ್ಮಿ ನಮ್ಮ ಟಿವಿಯ ನವೀನ್ ಶೆಟ್ಟಿ ಎಡ್ಮೆಮಾರ್ ಅವರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಉಭಯ ಜಿಲ್ಲೆಗಳಲ್ಲಿ ತುಳು ಭಾಷೆಗಾಗಿ ಸಾಕಷ್ಟು ಕೆಲಸ ಮಾಡಿದ ಇವರ ಉಪಸ್ಥಿತಿ ಹಾಗೂ ನಿರ್ದೇಶನದಲ್ಲಿ “ಆಟಿದ ಒಂಜಿ ದಿನ” ಬಹರೈನ್ ನಲ್ಲಿ ಸಂಪನ್ನಗೊಳ್ಳಲಿದೆ. ಇವರಲ್ಲದೆ ತುಳು ಕಾರ್ಯಕ್ರಮಗಳನ್ನು ಸಂಘಟಿಸಿ ಅನುಭವವಿರುವ ಮುಲ್ಕಿಯ ಯುವ ಪ್ರತಿಭೆ ಗಗನ್ ಚಂದ್ರಶೇಖರ್ ಸುವರ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.. ತುಳುನಾಡಿನಿಂದ ಆಟಿಯ ಖಾದ್ಯಗಳನ್ನು ತಯಾರಿಸುವ ನಿಟ್ಟಿನಲ್ಲಿ ಬೇಕಾಗುವ ತರಕಾರಿಗಳು ಹಾಗೂ ವಿವಿಧ ಎಲೆಗಳನ್ನು ವಿಶೇಷವಾಗಿ ಉಡುಪಿ, ಮಂಗಳೂರುಗಳಿಂದ ತುಳುಕೂಟದ ಸದಸ್ಯರು ಕೊಂಡೊಯ್ಯಲಿದ್ದಾರೆ. ತುಳುನಾಡಿನಲ್ಲಿ ಆಟಿ ತಿಂಗಳಿನಲ್ಲಿ ತಯಾರಿಸುವ ಖಾದ್ಯಗಳ ರುಚಿಯನ್ನು ಬಹ್ರೇನ್‌ನ ತುಳುವರಿಗೆ ಪರಿಚಯಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತುಳುಕೂಟ ಬಹ್ರೇನ್‌ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ. .
ಆ.9ರಂದು ಬಹ್ರೇನ್ ತುಳುಕೂಟದಿಂದ ʻಆಟಿದ ಒಂಜಿ ದಿನʼ ಸಂಭ್ರಮ
RELATED ARTICLES