ಪುತ್ತೂರು: ಕೆಲಸದ ಆಮಿಷವೊಡ್ಡಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಹರ್ಷಿತ್ ಎಂಬಾತನಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ.
ತಾಲೂಕಿನ ಬನ್ನೂರು ಬೈಲು ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಮಂಗಳೂರು ತಾಲೂಕು ವಾಮಂಜೂರು ಮೂಲದ ಯುವತಿಯ ಮೇಲೆ ಅತ್ಯಾಚಾರ ಯತ್ನ ನಡೆದಿತ್ತು. ಮಾ. 13ರಂದು ಘಟನೆ ನಡೆದಿದ್ದು, ಪೊಲೀಸ್ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿದ್ದರು.
ವಾಮಂಜೂರು ಮೂಲದ ಯುವತಿ ಮತ್ತು ಪುತ್ತೂರಿನ ಯುವಕ ಇನ್ಸ್ ಟಾಗ್ರಾಂನ ಮೂಲಕ ಸಂಪರ್ಕ ಹೊಂದಿದ್ದು, ಯುವತಿಯ ಕೋರಿಕೆ ಮೇರೆಗೆ ಪುತ್ತೂರಿನಲ್ಲಿ ಉದ್ಯೋಗಕ್ಕಾಗಿ ಯುವಕ ತನ್ನ ಸ್ನೇಹಿತರಿಗೆ ತಿಳಿಸಿದ್ದ. ಇದನ್ನು ದುರುಪಯೋಗಪಡಿಸಿಕೊಂಡ ಸ್ನೇಹಿತರು ಯುವತಿಯ ನಂಬರ್ ಪಡೆದು ಉದ್ಯೋಗ ಕೊಡಿಸುವುದಾಗಿ ಪುತ್ತೂರಿಗೆ ಕರೆಸಿದ್ದರು. ಪ್ರೊಫೈಲ್ ಬರೆಯಲೆಂದು ಬನ್ನೂರಿನ ನಿರ್ಜನ ಪ್ರದೇಶದ ಮನೆಯೊಂದಕ್ಕೆ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಯತ್ನ ನಡೆಸಲಾಗಿತ್ತು. ಬಳಿಕ ಯುವತಿ ಆಸ್ಪತ್ರೆಗೆ ದಾಖಲಾಗಿ, ಪುತ್ತೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನವಾಗಿತ್ತು.