ಪ್ರತೀ ದಿನ ಕುಣಿತ ಭಜನೆ ಜ.22ರಂದು ಧಾರ್ಮಿಕ ಸಭೆ,ಗೀತಾ ಸಾಹಿತ್ಯ ಸಂಭ್ರಮ
ಹಿಂದೂ ಧರ್ಮದ ಸದೃಢತೆಗೆ,ಅಯೋಧ್ಯೆ ಶ್ರೀ ರಾಮದೇವರ ಮಹೋತ್ಸವದ ಅಂಗವಾಗಿ, ಅಯೋಧ್ಯೆಗೆ ನೆಲ್ಲಿಕಾರು ಶಿಲೆ ಸಮರ್ಪಿತವಾದ ಸವಿನೆನಪಿಗಾಗಿ 2ನೇ ವರ್ಷದ 18 ದಿನಗಳ ಮಹೋತ್ಸವ ಕಾರ್ಯಕ್ರಮಕ್ಕೆ ಬಜಗೋಳಿ ದಿಡಿ೦ಬಿರಿ ಅಯ್ಯಪ್ಪ ಮಂದಿರದಲ್ಲಿ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಚಾಲನೆ ನೀಡಿದರು.
ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಸ್ತ ಮತ ಪಂಗಡದವರಿಗೂ ಬದುಕಲು ಸಮಾನ ಅವಕಾಶ ಸಂವಿಧಾನ ನೀಡಿದ್ದು,ವಿಶ್ವಕ್ಕೆ ಮಾದರಿಯಾದ ಆಡಳಿತ ವ್ಯವಸ್ಥೆ ನಮ್ಮ ದೇಶದಲ್ಲಿದೆ. ಆದರೆ ಅಲ್ಪಸಂಖ್ಯಾತರ ಓಲೈಕೆಗಾಗಿ ಬಹುಸಂಖ್ಯಾತ ಹಿಂದೂ ಧರ್ಮವನ್ನು ಕಡೆಗಣಿಸುವಂತಹ ಮತ್ತು ರಾಜಕೀಯವಾಗಿ ಮಾತ್ರ ಬಳಸಿಕೊಳ್ಳುವ ವ್ಯವಸ್ಥೆಯಿಂದಾಗಿ ಹಿಂದೂ ಧರ್ಮದ ಉಳಿವಿಗಾಗಿ ಎಲ್ಲ ಹಿಂದೂ ದರ್ಮದವರು ಜಾತಿ ಮತ,ಪಂಗಡ,ರಾಜಕೀಯ ವೈಷಮ್ಯ ಬದಿಗಿಟ್ಟು ಒಗ್ಗಟ್ಟಾಗುವುದರೊಂದಿಗೆ ಸಾಮೂಹಿಕವಾಗಿ ದೇವರಿಗೆ ಪ್ರಾರ್ಥನೆ ಮಾಡುವ ಅಗತ್ಯ ಕಾಲಗಟ್ಟದಲ್ಲಿ ನಾವಿದ್ದೇವೆ.
ಶ್ರೀ ರಾಮ ಜಯರಾಮ ಜಯಜಯ ರಾಮ ಎಂಬ ನಾಮ ಸಂಕೀರ್ತನೆಯೊಂದಿಗೆ ಭಕ್ತಿಪೂರ್ವಕವಾಗಿ ದೇವರನ್ನು ಪ್ರಾರ್ಥಿಸುವ ಈ ಕಾರ್ಯಕ್ರಮದಲ್ಲಿ ಸಮಸ್ತ ಹಿಂದೂ ಬಂಧುಗಳು ಭಾಗವಹಿಸಬೇಕು ಎಂದು ಡಾ.ರವೀಂದ್ರ ಶೆಟ್ಟಿ ಬಜಗೋಳಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ರಾಮ ತಾರಕ ಜಪ ಯಜ್ಞ ಸಮಿತಿಯ ಅಧ್ಯಕ್ಷ ದೇವಿದಾಸ್ ಪ್ರಭು,ಮುಡಾರು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ,ಪಂಚಾಯತ್ ಸದಸ್ಯ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.
ಜ.5ರಿಂದ ಜ.21ರ ಮಂಗಳವಾರದವರೆಗೆ ಪ್ರತೀ ದಿನ ಸಾಯಂಕಾಲ ಕುಣಿತ ಭಜನೆ ಹಾಗೂ ಜ.22 ಬುಧವಾರ ಸೂರ್ಯೋದಯದಿಂದ ಸೂರ್ಯಾಸ್ಥದ ವರೆಗೆ ಶ್ರೀ ರಾಮ ತಾರಕ ಜಪ ಯಜ್ಞ ನಡೆಯಲಿದೆ.
ಶ್ರೀ ರಾಮತಾರಕ ಜಪಯಜ್ಞದಲ್ಲಿ ಸಮಸ್ತ ಹಿಂದೂ ಬಂಧುಗಳಿಗೆ ಶ್ರೀ ರಾಮದೇವರಿಗೆ ಪುಷ್ಪಾರ್ಚನೆಯೊಂದಿಗೆ ಶ್ರೀ ರಾಮ ತಾರಕ ಜಪವನ್ನು ಪಠಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.ಸಂಜೆ 6-15ರಿಂದ ಸಮಸ್ತ ಹಿಂದೂ ಬಾಂಧವರಿಂದ ಅಯೋಧ್ಯೆಗೆ ಕಡೆ ಮುಖಮಾಡಿ ಹಣತೆಯನ್ನು ಕೈಯಲ್ಲಿ ಹಿಡಿದು ಮಹಾಮಂಗಳಾರತಿ ಕಾರ್ಯಕ್ರಮ ನಡೆಯಲಿದೆ.
ಧಾರ್ಮಿಕ ಸಭೆ:ಜ.22 ರಂದು ವಾಗ್ಮಿ ದಾಮೋದರ್ ಶರ್ಮಾರವರಿಂದ ಧಾರ್ಮಿಕ ಪ್ರವಚನ ಹಾಗೂ 7.30ರಿಂದ ವಿಠ್ಠಲ್ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ