ಶಿವಮೊಗ್ಗ: ಮದ್ಯ ಸೇವಿಸಿ ತನ್ನ ಮನೆ ಬಳಿ ಬಂದು ಗಲಾಟೆ ಮಾಡುವುದು ಹಾಗೂ ತನ್ನ ತಂದೆ, ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆಂದು ಬಾಮೈದನೇ ತನ್ನ ಬಾವನನ್ನು ಕೊಲೆ ಮಾಡಿಸಿರುವ ಘಟನೆ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದೆ.
ಭದ್ರಾವತಿ ತಾಲೂಕು ಮೈದೊಳಲು – ಮಲ್ಲಪುರ ಗ್ರಾಮದ ನಿವಾಸಿ ಪರಶುರಾಮ (45) ಕೊಲೆಯಾದವ. ಭದ್ರಾವತಿ ತಾಲೂಕು ಗೊಂದಿ ಗ್ರಾಮದ ನಿವಾಸಿ ಮಹಾಂತೇಶ್ ಹತ್ಯೆ ಮಾಡಿಸಿದ ಆರೋಪಿಯಾಗಿದ್ದಾನೆ. ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದರಿಯ ಮದುವೆ ಮಾಡಿದ ಕೆಲವು ತಿಂಗಳವರೆಗೆ ಚೆನ್ನಾಗಿಯೇ ಇದ್ದ ಪರಶುರಾಮ, ಬಳಿಕ ಕಾರಣವಿಲ್ಲದೇ ತಂಗಿಯ ಮನೆಗೆ ಹೋಗಿ ಜಗಳ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು, ಮನೆ ಬಳಿ ಬಂದು ಗಲಾಟೆ ಮಾಡಬಾರದು ಎಂದು ಮಹಾಂತೇಶ್ ತನ್ನ ಬಾವನಿಗೆ ಸಾಕಷ್ಟು ಸಲ ಬುದ್ದಿ ಹೇಳಿದರೂ ಪರಶುರಾಮ ತನ್ನ ಚಾಳಿ ಮುಂದುವರೆಸಿದ್ದ. ಇದರಿಂದ ಬೇಸರಗೊಂಡು ಪರಶುರಾಮನನ್ನು ಕೊಲೆ ಮಾಡಿಸಲು ನಿರ್ಧರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತನ್ನ ಸ್ನೇಹಿತರಿಬ್ಬರಲ್ಲಿ ಪರಶುರಾಮನನ್ನು ಕೊಲೆ ಮಾಡಿದರೆ ಹಣ ನೀಡುವುದಾಗಿ ಮಹಾಂತೇಶ್ ಹೇಳಿದ್ದು, ಅದರಂತೆ ಬಳಿಕ ಸುದೀಪ್ ತನ್ನ ಸ್ನೇಹಿತನಾದ ಅರುಣ್ ಎಂಬಾತನ ಜೊತೆ ಸೇರಿಕೊಂಡು ಎಂ.ಸಿ.ಹಳ್ಳಿ ಬಳಿಯ ಭದ್ರಾ ಕಾಲುವೆ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮದ್ಯ ಕುಡಿಸಿ, ಆತನ ಕುತ್ತಿಗೆಗೆ ಟವಲ್ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಅಲ್ಲೇ ಪೊದೆಯಲ್ಲಿ ಶವವನ್ನು ಬಿಟ್ಟು ಬಂದಿದ್ದರು. ಈ ಬಗ್ಗೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಮಹಾಂತೇಶ್, ಸುದೀಪ್ ಹಾಗೂ ಅರುಣ್ರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕೊಲೆ ಕುರಿತು ಮಾಹಿತಿ ನೀಡಿದ ಎಸ್ಪಿ ಮಿಥುನ್ ಕುಮಾರ್, ”ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಶುರಾಮ ಎಂಬಾತನನ್ನು ಮಹಾಂತೇಶ್ ತನ್ನ ಸ್ನೇಹಿತರಾದ ಸುದೀಪ್ ಹಾಗೂ ಅರುಣ್ ಎಂಬವರಿಂದ ಕೊಲೆ ಮಾಡಿಸಿದ್ದ. ಸದ್ಯ ಮೂವರೂ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ. ಕೃತ್ಯಕ್ಕೆ ಹಣ ನೀಡಿರುವ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.