ಉಪ್ಪಿನಂಗಡಿ: ಕಳೆದೆರಡು ವರ್ಷಗಳಿಂದ ಬೇಸಿಗೆಯಲ್ಲಿ ಬತ್ತುತ್ತಿದ್ದ ಬಂದಾರು ಗ್ರಾಮದಲ್ಲಿರುವ ಬಿಸಿ ನೀರ ಚಿಲುಮೆ ಮಳೆಗಾಲದಲ್ಲಿ ಮತ್ತೆ ಬಿಸಿನೀರ ಬುಗ್ಗೆ ಕಾಣಿಸಿಕೊಂಡಿದೆ. ಬಂಡೆಗಳ ನಡುವಿನಿಂದ ಬಿಸಿ ನೀರು ಹರಿದು ಬರಲಾರಂಭಿಸಿದ್ದು, ಈಗ ಮತ್ತೊಮ್ಮೆ ಆಕರ್ಷಣೆಯ ಕೇಂದ್ರವಾಗಿದೆ.
ಬಂದಾರು ಗ್ರಾಮದ ಅಂಕರಮಜಲಿನ ಬಟ್ಲಡ್ಕದಲ್ಲಿ ಮುಹಮ್ಮದ್ ಎಂಬವರ ಜಮೀನಿನಲ್ಲಿ ಕಲ್ಲುಗಳ ಸಂದಿನಿಂದ ಹರಿದು ಬರುವ ಬಿಸಿ ನೀರು ಬಹು ಚರ್ಚಿತ ವಿಷಯವಾಗಿದೆ. ಇದೊಂದು ಪ್ರಾಕೃತಿಕ ವಿಸ್ಮಯವಾಗಿದ್ದು, ಸಂಶೋಧಕರು ಭಾರೀ ಆಸಕ್ತಿಯಿಂದ ಇಲ್ಲಿಗೆ ಬರುವುದಿದೆ. ಈ ಬಿಸಿ ನೀರು ಬಂದು ಬೀಳುವ ಜಾಗದಲ್ಲಿ 12 ಅಡಿ ಉದ್ದ, ಏಳು ಅಡಿ ಅಗಲ, 5 ಅಡಿ ಆಳದ ಕೆರೆ ಮಾದರಿಯನ್ನು ಜಮೀನಿನ ಮಾಲೀಕರು ರೂಪಿಸಿ ಬಿಸಿ ನೀರನ್ನು ಸಂಗ್ರಹವಾಗಲು ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಬಿಸಿ ನೀರು ಚಿಲುಮೆ ಅನಾದಿ ಕಾಲದಿಂದಲೂ ಹೀಗೇ ಇತ್ತು. ವರ್ಷದ 365 ದಿನವೂ ಇದರಲ್ಲಿ ನೀರು ಬತ್ತುತ್ತಿರಲಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ಬೇಸಿಗೆಯಲ್ಲಿ ನೀರು ಬತ್ತಲಾರಂಭಿಸಿದೆ. ಈ ನೀರು ಬಂದು ಬೀಳುವಂತಹ ಕೆರೆಯಂತಹ ಜಾಗದ ಅಡಿಗೆ ಕಾಂಕ್ರೀಟ್ ಹಾಕಿ, ಕೆರೆಯ ಬದಿಯ ಬಂಡೆಗಳಿಗೆ ಬಣ್ಣ ಹಚ್ಚಿದ್ದಲ್ಲದೆ ಬಿಸಿ ನೀರು ಬರುವ ಜಾಗಕ್ಕೆ ಪೈಪೊಂದನ್ನು ಜೋಡಿಸಿದ್ದ ಬಿಟ್ಟರೆ ಮತ್ತೆ ಯಾವ ಸ್ವರೂಪವನ್ನೂ ಬದಲಾಯಿಸಿಲ್ಲ ಎನ್ನುತ್ತಾರೆ ಮುಹಮ್ಮದ್.
10 ವರ್ಷಗಳಿಂದ ವಿಜ್ಞಾನಿಗಳ ತಂಡವೊಂದು ಇಲ್ಲಿಗೆ ಆಗಮಿಸಿ ಅಧ್ಯಯನ ನಡೆಸುತ್ತಿದ್ದಾರೆ. ಮೊದಲು ಚೆನ್ನೈನಿಂದ ಸಂಶೋಧಕರು ಬರುತ್ತಿದ್ದರು, ಈಗ ತಿರುವನಂತಪುರಂನಿಂದ ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ವಿಜ್ಞಾನಿಗಳ ತಂಡವೊಂದು ಆರು ತಿಂಗಳಿಗೊಮ್ಮೆ ಬಂದು ಅಧ್ಯಯನ ನಡೆಸುತ್ತಿದೆ. ಈ ನಡುವೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಮುಹಮ್ಮದ್ ಅವರು ನೀರಿನ ತಾಪಮಾನ ಪರಿಶೀಲಿಸಿ ವರದಿ ಕಳುಹಿಸುತ್ತಿದ್ದಾರೆ.
ಸಾಮಾನ್ಯವಾಗಿ 65.5 ಡಿಗ್ರಿ ಸೆಲ್ಸಿಯಸ್ ಆಸುಪಾಸು ಇರುತ್ತಿದ್ದ ತಾಪಮಾನ, ಕೆಲವು ದಿನಗಳ ಹಿಂದೆ 40.3 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಇನ್ನೂ ನಿಗೂಢತೆ ಪತ್ತೆಹಚ್ಚಲಾಗದ ಇದು ವಿಜ್ಞಾನಿಗಳಿಗೆ ಸವಾಲಾಗಿದೆ.
ಜಾಗ ಸರ್ಕಾರ ಬಿಟ್ಟುಕೊಡಲು ಕೇಳಿಕೊಂಡಿತ್ತು. ಆದರೆ ಅಭಿವೃದ್ಧಿ ಮಾಡುವುದಾದರೆ ನಮ್ಮದೇನೂ ಆಕ್ಷೇಪವಿಲ್ಲ, ಆದರೆ ಜಮೀನು ಬಿಟ್ಟುಕೊಡುವುದಿಲ್ಲ ಎಂದು ಮುಹಮ್ಮದ್ ಹೇಳುತ್ತಾರೆ.
ಚರ್ಮರೋಗ ನಿವಾರಣೆಗೆ ಈ ನೀರು ಉತ್ತಮ ಎಂದು ಇದರ ಅನುಭವ ಪಡೆದವರು ಹೇಳುತ್ತಾರೆ. ಇಲ್ಲಿಗೆ ಬಂದು ಸ್ನಾನ ಮಾಡಿಕೊಂಡು ಹೋಗುವುದಕ್ಕೆ ನಮ್ಮದೇನೂ ಆಕ್ಷೇಪವಿಲ್ಲ. ಅವರಿಗೆ ಬೇಕಾದ ನೆರವು ಮಾಡಿಕೊಡುತ್ತೇನೆ. ಇದು ಗಡುಸು ನೀರಾಗಿದ್ದು, ಇದರಲ್ಲಿ ಸ್ನಾನ ಮಾಡುವಾಗ ಸೋಪ್‌ನಿಂದ ನೊರೆಯೇ ಬರುವುದಿಲ್ಲ, ಕೂದಲು ದಪ್ಪವಾಗುತ್ತದೆ ಎಂದು ಮುಹಮ್ಮದ್ ಹೇಳುತ್ತಾರೆ.