ಬಂಟ್ವಾಳ: ದೇಶದಲ್ಲಿ ಮುಸ್ಲಿಂ ತುಷ್ಠೀಕರಣದ ಜೊತೆಗೆ ರಾಷ್ಟ್ರ ವಿರೋಧಿ ನೀತಿ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ ತಿದ್ದುಪಡಿಗೊಳಿಸುವ ಚಾಳಿ ನಾಯಕರಿಂದಲೇ ಬಳುವಳಿಯಾಗಿ ಬಂದಿದೆ. ಈ ತನಕ ಗರಿಷ್ಟ ಬಾರಿ ಸಂವಿಧಾನ ತಿದ್ದುಪಡಿಗೊಳಿಸಿದ ದಾಖಲೆ ಕಾಂಗ್ರೆಸ್ ಹೆಸರಿನಲ್ಲಿದೆ.
ಇದೀಗ ಸಂವಿಧಾನ ಬದಲಾಯಿಸುವ ಬಗ್ಗೆ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ಹನಿ ಟ್ರ್ಯಾಪ್’ ನಿಂದ ಹಳ್ಳಕ್ಕೆ ಬಿದ್ದಿದ್ದು, ಕೂಡಲೇ ಅವರು ರಾಜೀನಾಮೆ ಸಲ್ಲಿಸಬೇಕು ಎಂದು ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಹೇಳಿದರು. ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ಕ್ಷೇತ್ರ ಬಿಜೆಪಿ ಸಮಿತಿ ವತಿಯಿಂದ ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ‘ರಾಜ್ಯದಲ್ಲಿ 18 ಶಾಸಕರನ್ನು 6 ತಿಂಗಳು ಅಮಾನತುಗೊಳಿಸಿದ ಸ್ಪೀಕರ್ ಯು.ಟಿ.ಖಾದರ್ ಗೆ ಈ ಜಿಲ್ಲೆಯ ಜನತೆ ತಕ್ಕ ಪಾಠ ಕಲಿಸಲಿದ್ದು, ಬಿಜೆಪಿ ಆಡಳಿತ ಹೊಂದಿರುವ ಇತರ ರಾಜ್ಯಗಳಿಗೆ ಹೊಸ ಸಂದೇಶ ರವಾನಿಸಿದ್ದಾರೆ’ ಎಂದು ಅವರು ಟೀಕಿಸಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ನಾಯಕಿ ಸುಲೋಚನಾ ಜಿ. ಕೆ. ಭಟ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಡಿಕೆಶಿ ಪ್ರತಿಕೃತಿ ದಹನ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಪ್ರಮುಖರಾದ ರಾಮದಾಸ್ ಬಂಟ್ವಾಳ, ಶಿವಪ್ರಸಾದ್ ಶೆಟ್ಟಿ, ದೇವಪ್ಪ ಪೂಜಾರಿ, ರವೀಂದ್ರ ಕಂಬಳಿ, ದಿನೇಶ್ ಅಮ್ಟೂರ್, ಕಮಲಾಕ್ಷಿ ಪೂಜಾರಿ, ಡೊಂಬಯ ಅರಳ, ಬಿ. ದಿನೇಶ್ ಭಂಡಾರಿ, ಸುದರ್ಶನ್ ಬಜ, ವಿಜಯ ರೈ, ಪುಷ್ಪರಾಜ್ ಚೌಟ, ಎ.ಗೋವಿಂದ ಪ್ರಭು, ಯಶೋಧರ ಕರ್ಬೆಟ್ಟು, ರೊನಾಲ್ಡ್ ಡಿಸೋಜ, ಆನಂದ ಶಂಭೂರ್, ಜನಾರ್ದನ ಬೊಂಡಾಲ, ಪುರುಷೋತ್ತಮ ಸಾಲ್ಯಾನ್, ನಂದರಾಮ ರೈ, ಮಚ್ಚೇಂದ್ರನಾಥ ಸಾಲ್ಯಾನ್, ಹರೀಶ್ ಶೆಟ್ಟಿ ಪಡು, ಜಯರಾಮ ರೈ ಕಲ್ಲಡ್ಕ, ವೆಂಕಟೇಶ ನಾವಡ, ಹರಿಪ್ರಸಾದ್, ಸಂಜೀವ ಪೂಜಾರಿ ಪಿಲಿಂಗಾಲು, ಜಿನರಾಜ ಕೋಟ್ಯಾನ್, ಪ್ರೇಮನಾಥ ಶೆಟ್ಟಿ, ದಿನೇಶ ಶೆಟ್ಟಿ ದಂಬೆದಾರು, ಕಿಶೋರ್ ಶೆಟ್ಟಿ ಅಂತರ ಮತ್ತಿತರರು ಇದ್ದರು.