ಬಂಟ್ವಾಳ: ಇಲ್ಲಿನ ಶಂಭೂರು ಗ್ರಾಮದ ಕಲ್ಲಮಾಳಿಗೆ ಇಷ್ಟದೇವತಾ ಮುಂಡಿತ್ತಾಯ ದೈವಸ್ಥಾನ ಸೇರಿದಂತೆ ಧರ್ಮರಸು ದೈವೊಂಗೊಲು ಆಲಂಗಾರ ಮಾಡ ಬರ್ಕೆ ಮತ್ತು ವೈದ್ಯನಾಥ ಜುಮಾದಿ ಬಂಟ ದೈವಸ್ಥಾನ ದಿಂಡಿಕೆರೆ ಜೋಡುಸ್ಥಾನದಲ್ಲಿ ಮಾ.9ರಿಂದ 11ರತನಕ ನಡೆಯಬೇಕಿದ್ದ ವಾರ್ಷಿಕ ನೇಮೋತ್ಸವಕ್ಕೆ ರಾಜಕೀಯ ಪ್ರೇರಿತವಾಗಿ ತಡೆಯೊಡ್ಡಿದವರ ವಿರುದ್ಧ ಬಿ.ಸಿ.ರೋಡು ಆಡಳಿತ ಸೌಧ ಎದುರು ಗ್ರಾಮಸ್ಥರು ಗುರುವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತೀ ವರ್ಷದಂತೆ ಈ ಬಾರಿ ಮಾ.2ರಂದು ಗೊನೆ ಮುಹೂರ್ತ ಮತ್ತು ಕೋಳಿ ಕುಂಟ ನಡೆದಿದ್ದು, ಮಾ.9ರಿಂದ 11ರತನಕ ಎರಡು ದೈವಸ್ಥಾನಗಳಲ್ಲಿ ಭಂಡಾರ ಬಂದು ನಡೆಬೇಕಿದ್ದ ವಾರ್ಷಿಕ ನೇಮೋತ್ಸವಕ್ಕೆ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ರಾಜಕೀಯ ಪ್ರೇರಿತವಾಗಿ ತಹಶೀಲ್ದಾರರ ಮೂಲಕ ತಡೆಯೊಡ್ಡಿದ್ದಾರೆ. ಆ ಮೂಲಕ ಸರ್ಕಾರದ ಕಾಯ್ದೆಯಂತೆ ರಚನೆಯಾದ ವ್ಯವಸ್ಥಾಪನಾ ಸಮಿತಿ ಮತ್ತು ಭಕ್ತರ ಧಾರ್ಮಿಕ ನಂಬಿಕೆಗೆ ಅಡ್ಡಿಪಡಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದರಿಂದಾಗಿ ಗ್ರಾಮದ ಮಕ್ಕಳ ಕಂಚಿಲು ಸೇವೆಗೆ ಧಕ್ಕೆಯಾಗಿದೆ. ಈ ಹಿಂದೆ ಇರಂತಬೆಟ್ಟು ಕುಟುಂಬಸ್ಥರು ವೈದ್ಯನಾಥ ಭಂಡಾರದ ಮನೆ ಬೀಗ ಒದೆದಿದ್ದು, ಭಂಡಾರದ ಮನೆಯಲ್ಲಿ ನಡೆಸಿದ್ದ ಅಷ್ಟಮಂಗಲ ಪ್ರಶ್ನೆ ಸಂದರ್ಭದಲ್ಲಿ ಧಾಂಧಲೆ ನಡೆಸಿ ಅದನ್ನೂ ನಿಲ್ಲಿಸಿದ ಶಾಪ ಅವರನ್ನು ತಟ್ಟದೆ ಬಿಡದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣಶೆ ಪ್ರಸಾದ್ ಆರೋಪಿಸಿದರು. ಶಂಭೂರು ತಾ.ಪಂ.ಮಾಜಿ ಸದಸ್ಯ ಆನಂದ ಶಂಭೂರು, ಪ್ರಮುಖರಾದ ಕೇಶವ ಬರ್ಕೆ, ನೋಣಯ ಪೂಜಾರಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ನೇಮೋತ್ಸವಕ್ಕೆ ತಡೆಯೊಡ್ಡಿದ ರಾಜಕಾರಣಿಗಳು ಮತ್ತು ಸ್ವಾಮೀಜಿಗೆ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು. ಜಿ.ಪಂ. ಮಾಜಿ ಸದಸ್ಯೆ ಕಮಲಾಕ್ಷಿ ಪೂಜಾರಿ, ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಪೂಜಾರಿ, ಭಂಡಾರದ ಮನೆ ಮುಖ್ಯಸ್ಥ ನವೀನ್ ಕೋಟ್ಯಾನ್, ದೈವಪಾತ್ರಿ ಜಗನ್ನಾಥ ಪೂಜಾರಿ, ಪ್ರಮುಖರಾದ ಯೋಗೀಶ, ಭೋಗನಾಥ, ಹೇಮಂತ್ ಪೂಜಾರಿ, ರಾಜೇಶ ರೆಂಜಮಾರು, ನಾಗರಾಜ ಕೋಟ್ಯಾನ್, ಗಣೇಶ ಎಂ. ಮತ್ತಿತರರು ಪಾಲ್ಗೊಂಡಿದ್ದರು.