ವಿಟ್ಲ: ಜಾರಿ ನಿರ್ದೇಶನಾಲಯದ ಅಧಿಕಾರಿಗಳೆಂದು ( ಇ.ಡಿ.) ನಂಬಿಸಿ ವಿಟ್ಲದ ಬೀಡಿ ಉದ್ಯಮಿಯೊಬ್ಬರ ಮನೆಯಿಂದ 30 ಲಕ್ಷ ರೂಪಾಯಿ ದರೋಡೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ನಡೆದಿದೆ.
ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಸುಲೈಮಾನ್ ಹಾಜಿ ಎಂಬವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಎರ್ಟಿಗಾ ಕಾರಿನಲ್ಲಿ ದಿಢೀರ್ ಆಗಮಿಸಿದ ತಂಡ ತಮ್ಮನ್ನು ಇ.ಡಿ. ಅಧಿಕಾರಿಗಳೆಂದು ಪರಿಚಯಿಸಿಕೊಂಡಿದೆ. ಬಳಿಕ ಮನೆಯಲ್ಲಿ ಸುಮಾರು ಎರಡು ತಾಸು ಶೋಧ ನಡೆಸುವ ನಾಟಕವಾಡಿದೆ.
ಅಕ್ರಮ ಹಣ ವರ್ಗಾವಣೆ ಸಹಿತ ಹಲವು ಅವ್ಯವಹಾರಗಳು ನಡೆದಿದೆ ಎಂದು ಮನೆಯವರನ್ನು ಬೆದರಿಸಿ ಮನೆಯಲ್ಲಿದ್ದ ಸುಮರು 30 ಲಕ್ಷ ರೂಪಾಯಿ ನಗದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಮೊಬೈಲ್ ದೋಚಿ ದೋಚಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.