ಬಂಟ್ವಾಳ: ಇಲ್ಲಿನ ಬಂಟ್ವಾಳ ಬೈಪಾಸ್ ನಿವಾಸಿ, ಯಕ್ಷಗಾನ ಕ್ಷೇತ್ರದಲ್ಲಿ ‘ಹಾಸ್ಯರಾಜ’ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ (೬೭) ಇವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ಸೋಮವಾರ ಬೆಳಿಗ್ಗೆ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ದ್ವಂದ್ವಾರ್ಥ ಮತ್ತು ಅಪಹಾಸ್ಯ ಇಲ್ಲದೆ ಶುದ್ಧ ಹಾಸ್ಯದ ಮೂಲಕ ಪ್ರೇಕ್ಷಕರ ಮನರಂಜಿಸುತ್ತಿದ್ದ ಇವರು ಬೆಂಗಳೂರಿನಲ್ಲಿ ಸೋಮವಾರ ನಡೆಯಲಿದ್ದ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಭಾನುವಾರ ತೆರಳಿದ್ದು, ಸೋಮವಾರ ಮುಂಜಾನೆ ಸುಮಾರು ೪ ಗಂಟೆಗೆ ಎದೆ ನೋವು ಕಾಣಿಸಿಕೊಂಡಾಗ ಜೊತೆಗಿದ್ದ ಕಲಾವಿದರು ಆಸ್ಪತ್ರೆಗೆ ಸೇರಿಸಿದರೂ ಅಷ್ಟರಲ್ಲಿ ಅವರು ನಿಧನರಾಗಿದ್ದಾರೆ.
ಕಳೆದ ೧೯೫೭ರ ಅ.೧೨ರಂದು ಬಂಟ್ವಾಳ ಗಣಪತಿ ಆಚಾರ್ಯ ಮತ್ತು ಭವಾನಿ ಆಚಾರ್ಯ ದಂಪತಿಗೆ ಜನಿಸಿದ ಜಯರಾಮ ಆಚಾರ್ಯರು, ಬಂಟ್ವಾಳ ಸರ್ಕಾರಿ ಬೋರ್ಡ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ತನ್ನ ತಂದೆಯವರ ಪ್ರೇರಣೆಯಿಂದ ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟ ನಡೆಸಿ ವೇಷವನ್ನೂ ಮಾಡಿದ್ದರು. ಧರ್ಮಸ್ಥಳ ಕ್ಷೇತ್ರದ `ಲಲಿತ ಕಲಾ ಕೇಂದ್ರ’ದಲ್ಲಿ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು. ಕಟೀಲು ಮೇಳ, ಪುತ್ತೂರು ಮೇಳ, ಕದ್ರಿ ಮೇಳ, ಕುಂಬಳೆ ಮೇಳ, ಎಡನೀರು, ಹೊಸನಗರ ಮೇಳದಲ್ಲಿ ತಿರುಗಾಟ ನಡೆಸಿ, ಪ್ರಸಕ್ತ ಹನುಮಗಿರಿ ಮೇಳ ಹೀಗೆ ಸುಮಾರು ೫೦ ವರ್ಷಗಳಿಂದ ಹಾಸ್ಯ ಕಲಾವಿದರಾಗಿದ್ದಾರೆ.
ಮೆರವಣಿಗೆ:
ಬೆಂಗಳೂರಿನಿಂದ ಆಂಬುಲೆನ್ಸ್ ಮೂಲಕ ಮೃತದೇಹ ಸೋಮವಾರ ಸಂಜೆ ೩ ಗಂಟೆಗೆ ಬಂಟ್ವಾಳ ಬೈಪಾಸ್ ಮನೆಗೆ ತಲುಪಿತು. ಮೃತರಿಗೆ ಶಾಸಕ ರಾಜೇಶ ನಾಯ್ಕ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಚಿವ ಬಿ.ರಮಾನಾಥ ರೈ, ಬಿಜೆಪಿ ಮುಖಂಡ ಬಿ.ದೇವದಾಸ ಶೆಟ್ಟಿ, ಯಕ್ಷಗಾನ ಮೇಳದ ಯಜಮಾನ ಪಳ್ಳಿ ಕಿಶನ್ ಹೆಗ್ಡೆ, ಹಾಸ್ಯ ಕಲಾವಿದರಾದ ಕಟೀಲು ಸೀತಾರಾಮ ಕುಮಾರ್, ದಿನೇಶ ಕೋಡಪದವು, ಕಲಾವಿದರಾದ ಸರಪಾಡಿ ಅಶೋಕ ಶೆಟ್ಟಿ, ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ, ಮೋಹನ್ ಅಮ್ಮುಂಜೆ, ಪ್ರೇಮ್ ರಾಜ್ ಕೊಯಿಲ, ವಿಜಯ ಕುಮಾರ್ ಕೊಡಿಯಾಲ್ ಬೈಲು ಮತ್ತಿತರರು ಅಂತಿಮ ನಮನ ಸಲ್ಲಿಸಿದರು.
ಭಜನೆ ಮತ್ತು ಯಕ್ಷಗಾನ ಭಾಗವತಿಕೆ ಹಾಡಿನೊಂದಿಗೆ ಮನೆಯಿಂದ ಸ್ಥಳೀಯ ಬಡ್ಡಕಟ್ಟೆ ಸಾರ್ವಜನಿಕ ಸ್ಮಶಾನತನಕ ಮೆರವಣಿಗೆ ಮೂಲಕ ಸಾಗಿ ಸಂಜೆ ೫ ಗಂಟೆಗೆ ಅಂತ್ಯಕ್ರಿಯೆ ನೆರವೇರಿತು.