ಬಂಟ್ವಾಳ : ದೇವಸ್ಥಾನದ ಬಾಗಿಲು ಮುರಿದ ಖದೀಮರು ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಕಳವು ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಎಂಬಲ್ಲಿ ಮಂಗಳವಾರ ನಡೆದಿದೆ. ಸುಜೀರು ಎಂಬಲ್ಲಿರುವ ಶ್ರೀದೇವಕಿಕೃಷ್ಣ ರವಳನಾಥ ಮಂದಿರದಲ್ಲಿ ಕಳ್ಳತನ ನಡೆದಿದೆ.
ಕಳ್ಳತನದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಂಜಾನೆ 4 ಗಂಟೆಗೆ ದೇವಸ್ಥಾನದ ಬಾಗಿಲು ಮುರಿದು ನೂರಾರು ವರ್ಷಗಳ ಹಳೆಯದಾದ ಒಂದೂವರೆ ಕೆ.ಜಿ.ತೂಕದ ಬೆಳ್ಳಿಯ ದೇವರ ಪೀಠ, ಬಂಗಾರದ ದೇವರ ಮೂಗುತಿ, ದೇವರ ಕೊಡೆ ಸೇರಿ ಒಟ್ಟು 2 ಕೆ.ಜಿ.ಯಷ್ಟು ಬೆಳ್ಳಿ ಹಾಗೂ 3 ಪವನ್ ಚಿನ್ನ ಕಳವು ಜೊತೆಗೆ ಕಾಣಿಕೆ ಹುಂಡಿಯಲ್ಲಿದ್ದ 2.30 ಲಕ್ಷ ನಗದು ಎಗರಿಸಿದ್ದಾರೆ ಕಳ್ಳರು.
ಸುಮಾರು 5 ಜನರ ತಂಡ ಈ ಕಳ್ಳತನದಲ್ಲಿ ಭಾಗಿಯಾಗಿರುವುದು ಸಿ.ಸಿ.ಕ್ಯಾಮರಾದಲ್ಲಿ ಕಂಡುಬಂದಿದೆ.ದೇವಸ್ಥಾನದ ಸುತ್ತಲೂ ತಿರುಗಾಡಿ ಗರ್ಭಗುಡಿಯ ಒಳಗೆ ಪ್ರವೇಶ ಮಾಡಿದ ಕಳ್ಳರು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ತಿರುಗಾಡಿದ್ದಾರೆ.
ಸ್ಥಳಕ್ಕೆನ ಬಂಟ್ವಾಳ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚುತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.