ಬಂಟ್ವಾಳ : ಇಂದಿನ ಮಕ್ಕಳು ನಿದ್ರಾಹೀನತೆಯಿಂದಾಗಿ ಹಲವಾರು ರೀತಿಯ ಮಾನಸಿಕ ಹಾಗೂ ದೈಹಿಕ ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ಸಾಮಾನ್ಯವಾಗಿದೆ. ಆದ್ದರಿಂದ ಸರಿಯಾದ ಸಮಯಕ್ಕೆ ಮಕ್ಕಳು ಮಲಗಿ ಸರಿಯಾದ ಸಮಯಕ್ಕೆ ಏಳುವುದನ್ನು ಅಭ್ಯಾಸಮಾಡಿಕೊಳ್ಳಬೇಕು ಎಂದು ನಿರ್ವಾಣ ಅಕಾಡೆಮಿ ಸಹ ಸ್ಥಾಪಕಾರಾದ ವಿಜಯಲಕ್ಷ್ಮಿ ನಿರ್ವಾಣ ನುಡಿದರು. ಇವರು ಬಂಟ್ವಾಳದ ವಿದ್ಯಾಗಿರಿಯ ಶ್ರೀ ವೆಂಕಟರಮಣಸ್ವಾಮಿ ಇಂಗ್ಲೀಷ್ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶ್ರೀ ವೆಂಕಟರಮಣ ಸ್ವಾಮೀ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ರೇಖಾ ಕೆ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಯೋಗ ವರ್ಧನ್ ಡಿ.ಎಮ್.ರವರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ತನ್ನದೇ ಆದ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಬೆಳೆಸಬೇಕಾದ ಕೆಲಸವಾಗಬೇಕಾಗಿದೆ.
ಕೇವಲ ಶಿಕ್ಷಕರೊಬ್ಬರಿಂದಲೇ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿಲ್ಲ. ಇದಕ್ಕೆ ಪೋಷಕರೂ ಅಷ್ಟೇ ಜವಾಬ್ದಾರರಾಗಿರುತ್ತಾರೆ ಎಂದು ನುಡಿದರು. ಎಸ್.ವಿ.ಎಸ್. ಇಂಗ್ಲೀಷ್ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಹರಿಪ್ರಸಾದ್ ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಶರತ್ ನಿರ್ವಾಣ, ಸಹ ಸ್ಥಾಪಕರು, ನಿರ್ವಾಣ ಅಕಾಡೆಮಿ ಹಾಗೂ ಶಾಲೆಯ ವಿದ್ಯಾರ್ಥಿ ಪ್ರತಿನಿಧಿ ಚಿ.ಅರ್ಪಣ್ ಆರ್ ರೈ ಇವರು ಉಪಸ್ಥಿತರಿದ್ದರು. ಎಸ್.ವಿ.ಎಸ್.ಇಂಗ್ಲೀಷ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ಬಂಗೇರ ಸ್ವಾಗತಿಸಿ, ಗೌತಮಿ ವಂದಿಸಿದರು. ಲಿಖಿತಾ ಮತ್ತು ತಂಡದವರು ಪ್ರಾರ್ಥಿಸಿದರು. ಶರ್ಮಿಳಾ ಬಹುಮಾನ ವಿತರಿಸಿದರು.