ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್‌ಗೆ ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಶರೀಫ್ ಸವಾಲು ಹಾಕಿರುವ ಆಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ, ಬಿಸಿ ರೋಡ್‌ನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಶರಣ್ ಪಂಪ್ವೆಲ್ ಬೆಂಬಲಿಗರು ನೆರೆದಿದ್ದು, ಪರಿಸ್ಥಿತಿ ಉದ್ವಿಗ್ವವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿಬಂದೋಬಸ್ತ್ ಏರ್ಪಡಿಸಿದ್ದಾರೆ. ಅಲ್ಲದೆ, ಸ್ಥಳಕ್ಕೆ ಶರಣ್ ಪಂಪ್ವೆಲ್ ಆಗಮಿಸಿದ್ದು, ಪೊಲೀಸರಿಗೆ ಇನ್ನಷ್ಟು ತಲೆನೋವನ್ನು ತಂದೊಡ್ಡಿದೆ.
ಪೊಲೀಸರ ಸರ್ಪಗಾವಲನ್ನು ಲೆಕ್ಕಿಸದೆ ಶರಣ್ ಪಂಪ್ವೆಲ್ ಬೆಂಬಲಿಗರು ನೆರೆದಿರುವುದರಿಂದ ಹೆದ್ದಾರಿಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ವೇಳೆ ಮಾತನಾಡಿರುವ ಶರಣ್ ಪಂಪ್ವೆಲ್, ಆತನ ಸವಾಲಿಗೆ ಉತ್ತರ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಆತ ಹೇಳಿದಂತೆ ಅವಶ್ಯಕತೆ ಬಿದ್ದರೆ ಮಸೀದಿಗೆ ಹೋಗುವುದಕ್ಕೂ ಸಿದ್ಧರಿದ್ದೇವೆ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುವ ಮೂಲಕ ಹಿಂದುತ್ವದ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹೇಳಿದ್ದಾರೆ.
ರ್ಯಾಲಿ ಮತ್ತು ಪ್ರತಿ ರ್ಯಾಲಿ ನಡೆಸುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಾಯ್ಸ್ ಮೆಸೇಜ್, ಚಾಟ್‌ಗಳು ನಡೆದಿರುವುದು ಗೊತ್ತಾಗಿದೆ. ಹೀಗಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಉನ್ನತ ಪೊಲೀಸ್ ಅಧಿಕಾರಿಗಳು ಬಿಸಿ ರೋಡಿಗೆ ಆಗಮಿಸಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡಿರುವ ಪುರಸಭಾ ಮಾಜಿ ಅಧ್ಯಕ್ಷ ಮೊಹಮ್ಮದ್ ಶರೀಫ್ ಮತ್ತು ಸದಸ್ಯ ಹಸೈನಾರ್ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈದ್ ಮಿಲಾದ್ ರ್ಯಾಲಿಯ ವೇಳೆ ದಾಳಿ ಮಾಡಿದರೆ ಏನಾಗಬಹುದು ಎಂದು ಶರಣ್ ಪಂಪ್ವೆಲ್ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಮಹಮ್ಮದ್ ಶರೀಫ್ ಸವಾಲು ಹಾಕಿದ್ದಾರೆನ್ನಲಾಗಿದೆ. ಸೆ. 16ರಂದು ಬಿ.ಸಿ. ರೋಡಿನ ಕೈಕಂಬದಲ್ಲಿ ನಡೆಯುವ ಮಿಲಾದ್ ರ್ಯಾಲಿ ವೇಳೆ ಬಂದು ನಿಲ್ಲುವಂತೆ ಶರಣ್ ಪಂಪ್ವೆಲ್‌ಗೆ ಸವಾಲು ಹಾಕಲಾಗಿತ್ತು ಎನ್ನಲಾಗಿದೆ. ಈ ಕುರಿತ ವಾಯ್ಸ್ ಮೆಸೇಜ್ ವೈರಲ್ ಆಗಿದೆ.
