ಬೆಳಗಾವಿ: ಪರಾರಿಯಾಗಿದ್ದ ಮಗಳು ಗರ್ಭಿಣಿ ಎಂದು ಅಪಪ್ರಚಾರ ಮಾಡಿದ್ದಾನೆಂದು ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ್ದಾನೆ. ವಿಠ್ಠಲ್ ಚೌವ್ಹಾನ್ (51) ಕೊಲೆಯಾದ ವ್ಯಕ್ತಿ. ಭೀಮಪ್ಪ ಚೌವ್ಹಾನ್ ಕೊಲೆ ಮಾಡಿದ ಆರೋಪಿ. ಕೊಲೆ ಆರೋಪಿಗಳಾದ ಭೀಮಪ್ಪ ಚೌವ್ಹಾನ್ ಮತ್ತು ಲಕ್ಷ್ಮಣ ಪಡತರೆಯನ್ನು ಘಟಪ್ರಭಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಭೀಮಪ್ಪ ಚೌವ್ಹಾನ್ ಮಗಳು ಪಕ್ಕದ ಗ್ರಾಮದ ಯುವಕನನ್ನು ಪ್ರೀತಿಸಿದ್ದಳು. ತನ್ನ ಪ್ರಿಯತಮ ಸರ್ಕಾರಿ ನೌಕರಿಯಲ್ಲಿದ್ದಾನೆ ಎಂದು ನಂಬಿ ಯುವತಿ ಪ್ರೀತಿಸಿದ್ದಾಳೆ. ಪ್ರೇಮಿಗಳು ಓಡಿ ಹೋಗಿ ಮದುವೆಯಾಗಿದ್ದಾರೆ. ಮೂರು ತಿಂಗಳು ಜೀವನ ನಡೆಸಿದ ಬಳಿಕ, ಯುವತಿಗೆ ತನ್ನ ಪತಿ ಸರ್ಕಾರಿ ನೌಕರನಲ್ಲ ಎಂದು ತಿಳಿದಿದೆ. ಇದರಿಂದ ಕೋಪಗೊಂಡ ಯುವತಿ ತವರು ಮನೆಗೆ ಮರಳಿದ್ದಾಳೆ. ತವರು ಮನೆಗೆ ಬಂದ ಬಳಿಕ ಯುವತಿಯ ಚಿಕ್ಕಪ್ಪ ವಿಠ್ಠಲ್ ಚೌವ್ಹಾನ್ ಆಕೆಯ ಬಗ್ಗೆ ಊರು ತಂಬ ಸುಳ್ಳು ಸುದ್ದಿ ಹಬ್ಬಿಸಲು ಆರಂಭಿಸಿದ್ದಾನೆ. ನನ್ನ ಅಣ್ಣನ ಮಗಳು ಗರ್ಭಿಣಿಯಾಗಿದ್ದಾಳೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ಈ ವಿಚಾರ ಭೀಮಪ್ಪ ಚೌವ್ಹಾನ್ಗೆ ತಿಳಿದಿದೆ. ಇದೇ ವಿಚಾರಕ್ಕೆ ಭೀಮಪ್ಪ ಮತ್ತು ವಿಠ್ಠಲ್ ಮಧ್ಯೆ ಜಗಳವಾಗಿದೆ.
ಭೀಮಪ್ಪ ಚೌವ್ಹಾನ್ ಕಳೆದ ತಿಂಗಳು 30ರಂದು ಗ್ಯಾಂಗ್ ಕಟ್ಟಿಕೊಂಡು ಬಂದು, ರಾಡ್ ಹಾಗೂ ಕಟ್ಟಿಗೆಗಳಿಂದ ವಿಠ್ಠಲ್ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ವಿಠ್ಠಲ್ ಚೌವ್ಹಾನ್ನನ್ನು ಬೆಳಗಾವಿ ಖಾಸಗಿ ಆಸ್ಪತ್ರೆ ದಾಖಲು ಮಾಡಿದ್ದರು. ಆದರೆ, ಸೆಪ್ಟೆಂಬರ್ 4 ರಂದು ವಿಠ್ಠಲ್ ಚೌವ್ಹಾನ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.