ಬಳ್ಳಾರಿ: ಮದ್ಯಪಾನ ಮಾಡಿ ಆಸ್ಪತ್ರೆಗೆ ಬರುತ್ತಿದ್ದ ಸಿರಗುಪ್ಪ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಈರಣ್ಣ ಅವರನ್ನು ಅಮಾನತು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ವೈದ್ಯ ಈರಣ್ಣ ಅವರು ಆಸ್ಪತ್ರೆಗೆ ಕುಡಿದು ಬಂದು ಸಿಬ್ಬಂದಿ ಮತ್ತು ಸಾರ್ವಜನಿಕರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು.
ಎಚ್ಚೆತ್ತ ಬಳ್ಳಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯ ಈರಣ್ಣ ವಿರುದ್ಧ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಸೂಚನೆ ಮೇರೆಗೆ ತನಿಖೆ ನಡೆಸಿದ ಜಿಲ್ಲಾ ಆರೋಗ್ಯ ಅಧಿಕಾರಿಗಳು, ಇಲಾಖೆಗೆ ವರದಿ ಸಲ್ಲಿಸಿದರು.
ವರದಿಯಲ್ಲಿ ವೈದ್ಯ ಈರಣ್ಣ ಮದ್ಯಪಾನ ಮಾಡಿ ಆಸ್ಪತ್ರೆಗೆ ಬಂದು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ, ವೈದ್ಯ ಈರಣ್ಣ ಕರ್ತವ್ಯ ಲೋಪ ಹಾಗೂ ದುರ್ನಡತೆಯ ಆಧಾರದ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಇಲಾಖೆ ಆದೇಶ ಹೊರಡಿಸಿದೆ.