ಅಕ್ರಮ -ಸಕ್ರಮ ಯೋಜನೆಯ ಎನ್ ಸಿ ಆರ್ ಕಡತಗಳನ್ನು ಬ್ರೋಕರ್ ಕೈಗೆ ಕೊಟ್ಟು ಬಚ್ಚಿಟ್ಟು ದಂಧೆ ನಡೆಸುತ್ತಿದ್ದ ಖದೀಮ ಗ್ರಾಮಕರಣಿಕ –
ಬ್ರೋಕರ್ ನಾಪತ್ತೆ

ಬೆಳ್ತಂಗಡಿ : ಇಲಾಖಾ ಕಡತ ದುರುಪಯೋಗವೆಸಗಿ ತಹಶೀಲ್ದಾರ್ ಕೈಗೆ ಸಿಕ್ಕಿ ಬಿದ್ದ ತಣ್ಣೀರುಪಂಥ ಗ್ರಾಮಕರಣಿಕ ಜಯಚಂದ್ರ ಬಂಧನದ ಬೆನ್ನಲ್ಲೇ ಈತ ಖದೀಮ ದಲ್ಲಾಳಿ ಜೊತೆ ಸೇರಿಕೊಂಡು ಹೇಗೆ ತನ್ನ ಜೇಬು ತುಂಬಿಸಿಕೊಳ್ಳುವ ಹೆಗ್ಗಣವಾದ ಎಂಬುದೀಗ ಬಯಲಾಗಿದೆ.
ಸರಕಾರದ ಕೆಲಸ ದೇವರ ಎಂಬ ಧ್ಯೇಯ ವಾಕ್ಯ ಈತನ ಪಾಲಿಗೆ ಸರಕಾರದ ಕೆಲಸ ದೋಚುವ ಕೆಲಸ ಎಂಬತಾಗಿದೆ.

ಬೆಳ್ತಂಗಡಿ ತಾಲೂಕಿನಲ್ಲಿ 2018 ರಿಂದ 2022 ರವರ ಅವಧಿಯಲ್ಲಿ ಸರಕಾರದ ಅಕ್ರಮ -ಸಕ್ರಮ ಯೋಜನೆಯ ಎನ್.ಸಿ.ಆರ್ ಕಡತಗಳನ್ನು ಬ್ರೋಕರ್ ಗಳ ವಶಕ್ಕೆ ನೀಡಿ ಫಲಾನುಭವಿಗಳ ಜೇಬಿಗೆ ಕತ್ತರಿ ಹಾಕಲು ಸಂಚು ರೂಪಿಸಿಕೊಂಡಿದ್ದ ಡೀಲಿಂಗ್ ಚತುರ ಗ್ರಾಮಕರಣಿಕ ಜಯಚಂದ್ರ ಮತ್ತು ಬ್ರೋಕರ್ ರೆಡ್ ಹ್ಯಾಂಡ್ ಅಗಿ ಬೆಳ್ತಂಗಡಿಯ ನೂತನ ತಹಶೀಲ್ದಾರ್ ಪೃಥ್ವೀ ಸಾನಿಕಮ್ ಕೈಗೆ ಸಿಕ್ಕಿಬಿದ್ದಿದ್ದು ಗ್ರಾಮಕರಣಿಕ ಬಂಧತನಾದರೆ ದಲ್ಲಾಳಿ ಪರಾರಿಯಾಗಿದ್ದಾನೆ.

ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ 01/01/2018 ರಿಂದ 16/08/2022 ರ ಅವಧಿಯ ಕೊಕ್ಕಡ ಹೋಬಳಿಯ ಅಕ್ರಮ ಸಕ್ರಮದ ಎನ್.ಸಿ.ಆರ್ ಕಡತಗಳ ಕೇಸ್ ವರ್ಕರ್ ಅಗಿದ್ದ ಜಯಚಂದ್ರ(36) ಎಂಬಾತನು ಶಿಬಾಜೆಯ ಮರಗಳ್ಳನೆಂಬ ಕುಖ್ಯಾತಿ ಪಡೆದಿರುವ ಬ್ರೋಕರ್ ಪಿ ಎನ್ ರಾಜು (48) @ ಬಿ ಟೆ ರಾಜು ಎಂಬಾತನ ಜೊತೆ ಸೇರಿದ ಹಣ ಮಾಡುವ ಉದ್ದೇಶದಿಂದ ಸರಕಾರಿ ಕರ್ತವ್ಯವನ್ನು ಪಾರದರ್ಶಕವಾಗಿ ಮಾಡದೆ ತನ್ನ ದಂಧೆಗಾಗಿ ಬ್ರೋಕರ್ ಕೈಗೆ ಕಾನೂನು ಬಾಹಿರವಾಗಿ ಕಡತಗಳನ್ನೇ ನೀಡಿ ಅಥವಾ ಬಚ್ಚಿಟ್ಟು ಅದೇ ಕಡತಗಳನ್ನು ನಂತರ‌ ಬ್ರೋಕರ್ ಬೆಳ್ತಂಗಡಿ ತಾಲೂಕು ಕಚೇರಿಗೆ ನೀಡಿದ್ದಾನೆ‌.

ಈ ವಿಚಾರ ತಿಳಿದು ಸಂಶಯಗೊಂಡ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ತಾಲೂಕು ಕಛೇರಿಯಲ್ಲಿ ಅಂತರಿಕ ತನಿಖೆ ನಡೆಸಿದಾಗ ಗ್ರಾಮಕರಣಿಕ ಜಯಚಂದ್ರ ಮತ್ತು ದಲ್ಲಾಳಿ ಪಿ ಎನ್ ರಾಜು ಸೇರಿ ಸರಕಾರಕ್ಕೆ ವಂಚನೆ ಎಸಗಿದ್ದು ಬೆಳಕಿಗೆ ಬಂದಿದೆ.
ಪ್ರಕರಣವನ್ನು ಆಂತರಿಕ ತನಿಖೆ ನಡೆಸಿ ಪುತ್ತೂರು
ಎ ಸಿ ಮತ್ತು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದು ಅವರ ಅದೇಶದಂತೆ ಆ:17ರಂದು ತಹಶೀಲ್ದಾರ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಜಯಚಂದ್ರನನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮನೆಯಲ್ಲಿ ಬಂಧಿಸಿದ್ದಾರೆ.
ಆರೋಪಿ ಜಯಚಂದ್ರನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ್ದು ಎರಡನೇ ಆರೋಪಿ ಬ್ರೋಕರ್ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪಡಂತಾಜೆ ನಿವಾಸಿ ಪಿಎನ್‌ ರಾಜು ಕಳೆದ ನಾಲ್ಕು ದಿನದಿಂದ ತಲೆಮರೆಸಿಕೊಂಡಿದ್ದಾನೆ.
ಆತನ ಪತ್ತೆಗೆ ಬೆಳ್ತಂಗಡಿ ಪೊಲೀಸರು ಬಲೆ ಬೀಸಿದ್ದಾರೆ‌‌‌.