ಬೆಂಗಳೂರು : ಬೆಂಗಳೂರಿನಲ್ಲಿ ಸೋಮವಾರ ಮಹಿಳೆಯೊಬ್ಬರು ತನ್ನ 5 ವರ್ಷದ ಮಗಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಾವಗಡ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದ ಮಹಿಳೆ, ಮಗಳು ರೋಷಿಣಿಯನ್ನು ಕೊಲೆ ಮಾಡಿ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆ 10 ವರ್ಷಗಳ ಹಿಂದೆ ಚಾರ್ಟರ್ಡ್ ಅಕೌಂಟೆಂಟ್ ಜತೆ ವಿವಾಹವಾಗಿದ್ದರು.
ಮಹಿಳೆ ಡೆತ್ನೋಟ್ ಕೂಡ ಬರೆದಿಟ್ಟಿದ್ದು, ಪತಿಯ ಅನೈತಿಕ ಸಂಬಂಧದ ಬಗ್ಗೆ ಉಲ್ಲೇಖಿಸಿದ್ದಾರೆ. ಶ್ರುತಿಯ ಪತಿಯನ್ನು ವಶಕ್ಕೆ ಪಡೆದು ಬಾಗಲಗುಂಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರಿನ ನಾಗಸಂದ್ರದ ರಾಮಯ್ಯ ಲೇಔಟ್‌ನಲ್ಲಿರುವ ಮನೆಯಲ್ಲಿ ಘಟನೆ ನಡೆದಿದ್ದು, ಆ ಸಮಯದಲ್ಲಿ ಮಹಿಳೆಯ ಪತಿ ಮನೆಯಲ್ಲಿ ಇರಲಿಲ್ಲ.
ಅನೈತಿಕ ಸಂಬಂಧ, ವರದಕ್ಷಿಣೆ ಕಿರುಕುಳದ ಆರೋಪ
ಘಟನಾ ಸ್ಥಳದಲ್ಲಿ ದೊರೆತ ಡೆತ್ನೋಟ್ನಲ್ಲಿ, ಮಹಿಳೆಯ ಪತಿಗೆ ಬೇರೊಬ್ಬ ಸ್ತ್ರೀಯೊಂದಿಗೆ ಸಂಬಂಧವಿದೆ. ಅಷ್ಟೇ ಅಲ್ಲದೆ, ವರದಕ್ಷಿಣೆಗಾಗಿ ಆತ ಕಿರುಕುಳ ನೀಡುತ್ತಿದ್ದಾನೆ ಎಂದು ಉಲ್ಲೇಖಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2014 ರಲ್ಲಿ ವಿವಾಹವಾಗಿದ್ದ ದಂಪತಿಯ ಬಾಂಧವ್ಯ ಹದಗೆಟ್ಟಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧದ ಅನುಮಾನವು ಅವರ ದಾಂಪತ್ಯದಲ್ಲಿ ಜಗಳಕ್ಕೆ ಕಾರಣವಾಯಿತು. ಇದರಿಂದಾಗಿ ಆಗಾಗ್ಗೆ ದಂಪತಿ ಜಗಳವಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಮಹಿಳೆಯ ಪತಿಯ ವಿರುದ್ಧ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.