Wednesday, October 9, 2024
Homeಅಪರಾಧಬೆಂಗಳೂರು: ಹಣಕ್ಕಾಗಿ ಸಾಕು ಮಗಳಿಂದ ಚಿಕ್ಕಮ್ಮಳ ಕೊಲೆ ಯತ್ನ

ಬೆಂಗಳೂರು: ಹಣಕ್ಕಾಗಿ ಸಾಕು ಮಗಳಿಂದ ಚಿಕ್ಕಮ್ಮಳ ಕೊಲೆ ಯತ್ನ

ಬೆಂಗಳೂರು : ಹಣಕ್ಕಾಗಿ ತನ್ನನ್ನು ಸಾಕಿ ಸಲುಹಿದ ಚಿಕ್ಕಮ್ಮಳ ಕೊಲೆಗೆ ಯತ್ನಿಸಿದ ಸಂತ್ರಸ್ತೆ ಸಾಕು ಮಗಳು ಹಾಗೂ ಅಳಿಯನನ್ನು ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಶವಂತಪುರದ ನಿವಾಸಿ ಅಣ್ಣಮ್ಮ ಹಲ್ಲೆಗೊಳಗಾಗಿದ್ದು, ಈ ಸಂಬಂಧ ಆಕೆಯ ಸಾಕು ಮಗಳು ಸುಚಿತ್ರಾ ಮತ್ತು ಅಳಿಯ ಮುನಿರಾಜು ಬಂಧನವಾಗಿದೆ. ಆರೋಪಿಗಳಿಂದ ಸಂತ್ರಸ್ತೆ ಮನೆಯಲ್ಲಿ ದೋಚಿದ್ದ 8.07 ಲಕ್ಷ ರೂ. ಮೌಲ್ಯದ 78 ಗ್ರಾಂ ಚಿನ್ನ, 130 ಗ್ರಾಂ ಬೆಳ್ಳಿ ಹಾಗೂ ನಗದು ಜಪ್ತಿ ಮಾಡಲಾಗಿದೆ.

ಇತ್ತೀಚಿಗೆ ಆರ್‌ಎಂಸಿ ಯಾರ್ಡ್ ಬಸ್ ನಿಲ್ದಾಣದ ಬಳಿ ಅಣ್ಣಮ್ಮ ಅವರಿಗೆ ಚಾಕುವಿನಿಂದ ಇರಿದು ಆರೋಪಿಗಳು ಪರಾರಿಯಾಗಿದ್ದರು. ಕೂಡಲೇ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಸಾರ್ವಜನಿಕರು ದಾಖಲಿಸಿದರು. ಚೇತರಿಸಿಕೊಂಡ ಬಳಿಕ ಅಣ್ಣಮ್ಮ ದೂರು ನೀಡಿದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಮೂರು ದಶಕಗಳ ಹಿಂದೆ ತಮ್ಮ ಪತಿ ಮೃತಪಟ್ಟ ಬಳಿಕ ಏಕಾಂಗಿಯಾಗಿದ್ದ ಅಣ್ಣಮ್ಮ ಅವರು, ತಮ್ಮ ಅಕ್ಕನ ಮಗಳು ಸುಚಿತ್ರಾಳನ್ನು ಮನೆಗೆ ಕರೆತಂದು ಸಾಕಿದ್ದರು. ತಾವು ದುಡಿದು ಸಂಪಾದಿಸಿದ ಹಣದಲ್ಲಿ ಯಶವಂತಪುರದಲ್ಲಿ ಎರಡು ಅಂತಸ್ತಿನ ಕಟ್ಟಡ ಖರೀದಿಸಿದ್ದ ಅಣ್ಣಮ್ಮ ಅವರು, ಆ ಕಟ್ಟಡವನ್ನು ಮಾಸಿಕ 30 ಸಾವಿರ ರೂ.ಗೆ ಬಾಡಿಗೆ ಕೊಟ್ಟಿದ್ದರು. ತಮ್ಮ ಮಗಳಿಗೆ ಲಾರಿ ಚಾಲಕ ಮುನಿರಾಜು ಜತೆ ಮದುವೆ ಮಾಡಿಸಿದ ಅವರು, ತಾವೇ ಮಗಳಿಗೆ ಮನೆ ಭೋಗ್ಯಕ್ಕೆ ಕೊಡಿಸಿ ನೆಲೆ ಕಾಣಿಸಿದ್ದರು.

ಸುಚಿತ್ರಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ದುರಾಸೆಗೆ ಬಿದ್ದ ಸುಚಿತ್ರಾ ದಂಪತಿ, ಅಣ್ಣಮ್ಮನವರ ಬಳಿ ಚಿನ್ನಾಭರಣ ಹಾಗೂ ಹಣ ದೋಚಲು ಸಂಚು ರೂಪಿಸಿದ್ದರು. ಅಂತೆಯೇ ಮಾ.18 ರಂದು ರಾತ್ರಿ ಲಾರಿ ಮಾಲಿಕ ನನ್ನ ಪತಿಗೆ ಸಂಬಳ ಕೊಟ್ಟಿಲ್ಲ. ನೀನು ಹೇಳಿ ಕೊಡಿಸು ಬಾ ಎಂದು ಆರ್‌ಎಂಸಿ ಯಾರ್ಡ್ ಬಳಿಗೆ ಚಿಕ್ಕಮ್ಮಳನ್ನು ಸುಚಿತ್ರಾ ಕರೆತಂದಿದ್ದರು. ಆಗ ಹಿಂಬದಿನಿಂದ ಬಂದ ಅಳಿಯ ಮುನಿರಾಜು, ಚಾಕುವಿನಿಂದ ಅತ್ತೆಗೆ ಇರಿದು ಕೊಲೆಗೆ ಯತ್ನಿಸಿದ್ದ. ಈ ಅನಿರೀಕ್ಷಿತ ದಾಳಿಯಿಂದ ಭೀತಿಗೊಂಡ ಅವರು, ಅಳಿಯನಿಗೆ ಪ್ರತಿರೋಧ ತೋರಿಸಿ ಜೀವ ರಕ್ಷಣೆಗೆ ಜೋರಾಗಿ ಕೂಗಿದ್ದಾರೆ. ಆಗ ಅಣ್ಣಮ್ಮ ಅವರಿಗೆ ಚಾಕುವಿನಿಂದ ಇರಿದು ಆತ ಪರಾರಿಯಾಗಿದ್ದ. ಈ ಚೀರಾಟ ಕೇಳಿ ಜಮಾಯಿಸಿದ ಸಾರ್ವಜನಿಕರು, ಅಣ್ಣಮ್ಮ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಕೃತ್ಯ ಎಸಗಿದ ಬಳಿಕ ಅಣ್ಣಮ್ಮ ಅವರ ಮನೆಗೆ ತೆರಳಿ ಚಿನ್ನಾಭರಣ ದೋಚಿ ಧರ್ಮಸ್ಥಳಕ್ಕೆ ದಂಪತಿ ಪರಾರಿಯಾಗಿದ್ದರು. ಈ ಘಟನೆ ಬಗ್ಗೆ ಮಾಹಿತಿ ಪಡೆದ ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರು, ಆಸ್ಪತ್ರೆಗೆ ತೆರಳಿ ಹಲ್ಲೆಗೊಳಗಾದ ಸಂತ್ರಸ್ತೆಯನ್ನು ವಿಚಾರಿಸಿದಾಗ ಹಲ್ಲೆ ಹಿಂದಿನ ಕಾರಣ ಗೊತ್ತಾಗಿದೆ. ತಕ್ಷಣವೇ ಕಾರ್ಯಾಚರಣೆಗಿಳಿದ ಪೊಲೀಸರು, ಕೊನೆಗೆ ಮೈಸೂರಿನಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಕರೆತಂದಿದ್ದಾರೆ.

ಈ ಹಿಂದೆ ಸಹ ಕೊಲೆ ಯತ್ನ

ಮನೆಯಲ್ಲಿ ಕೂಡಾ ಹಣಕ್ಕಾಗಿ ಅಣ್ಣಮ್ಮ ಅವರ ಕೊಲೆಗೆ ಸುಚಿತ್ರಾ ದಂಪತಿ ಎರಡ್ಮೂರು ಬಾರಿ ಯತ್ನಿಸಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಒಮ್ಮೆ ಅಣ್ಣಮ್ಮ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ದಂಪತಿ ಯತ್ನಿಸಿದ್ದರು. ಆದರೆ ಮೊಮ್ಮಗ ಬಂದಿದ್ದರಿಂದ ಅವರು ಜೀವ ಉಳಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

RELATED ARTICLES
- Advertisment -
Google search engine

Most Popular