ಬೆಂಗಳೂರು: ಅಡುಗೆ ಅನಿಲ ಸೋರಿಕೆಯಾಗಿ ಸ್ಫೋಟ: ಐವರ ಸ್ಥಿತಿ ಗಂಭೀರ

0
143

ಬೆಂಗಳೂರು : ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಂಪಿಗೆಹಳ್ಳಿಯ ಎಂ.ಎಸ್.ನಗರದ ನಿವಾಸಿ ಮದನ್ ಬಹೋರಾ(32), ಆತನ ಪತ್ನಿ ಪ್ರೇಮಾಜಾಲಾ( 28), ಪುತ್ರಿಯರಾದ ಮೀರಾದಾ(12), ಒಹೋರಾ(10) ಹಾಗೂ ಪುತ್ರ ಪ್ರಶಾಂತ್(6) ಗಾಯಗೊಂಡವರು. ಐವರ ಪೈಕಿ ಮದನ್‌ಗೆ ಶೇ.90ರಷ್ಟು ಗಾಯಗಳಾಗಿದ್ದು, ಉಳಿದ ನಾಲ್ವರಿಗೂ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿವೆ. ಸದ್ಯ ಐವರು ಗಾಯಾಳುಗಳಿಗೂ ವಿಕ್ಟೋರಿಯಾ ಆಸ್ಪತ್ರಸ್ತೆಯ ಸುಟ್ಟುಗಾಯ ವಿಭಾಗದಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳ ಮೂಲದ ಮದನ್‌ ಉದ್ಯೋಗ ಅರಸಿ ಕೆಲ ವರ್ಷಗಳ ಹಿಂದೆ ಕುಟುಂಬ ಸಮೇತ ನಗರಕ್ಕೆ ಬಂದಿದ್ದರು. ಎಂ.ಎಸ್‌.ನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಮದನ್‌ ಝೋಮ್ಯಾಟೋ ಫುಡ್‌ ಡೆಲಿವರಿ ಬಾಯ್‌ ಕೆಲಸ ಮಾಡುತ್ತಿದ್ದರು. ಪತ್ನಿ ಮಕ್ಕಳನ್ನು ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದರು. ಬುಧವಾರ ರಾತ್ರಿ 11 ಗಂಟೆಗೆ ಕೆಲಸ ಮುಗಿಸಿಕೊಂಡು ಮದನ್‌ ಮನೆಗೆ ಬಂದಿದ್ದಾರೆ. ಈ ವೇಳೆಗೆ ಮಕ್ಕಳು ಊಟ ಮುಗಿಸಿ ನಿದ್ದೆಗೆ ಜಾರಿದ್ದರು. ಬಳಿಕ ಊಟ ಮುಗಿಸಿದ ಮದನ್‌ ಮಲಗಲು ಬಂದಾಗ, ಪತ್ನಿ ಪ್ರೇಮಾಜಾಲ ಅಡುಗೆ ಅನಿಲ ಸೋರಿಕೆಯ ವಾಸನೆ ಬರುತ್ತಿದೆ. ಒಮ್ಮೆ ಅಡುಗೆ ಮನೆಯಲ್ಲಿ ಪರಿಶೀಲಿಸುವಂತೆ ಹೇಳಿದ್ದಾರೆ.

ಅದರಂತೆ ಮದನ್‌ ಅಡುಗೆ ಮನೆಗೆ ತೆರಳಿ ಏಕಾಏಕಿ ಬೆಂಕಿ ಕಡ್ಡಿ ಗೀರಿದ ಪರಿಣಾಮ ಸಿಲಿಂಡರ್ ಸ್ಫೋಟಗೊಂಡಿದೆ. ಮನೆಯ ಕಿಟಕಿಗಳ ಬಾಗಿಲು ಹಾಕಿದ್ದ ಪರಿಣಾಮ ಇಡೀ ಮನೆಗೆ ಗ್ಯಾಸ್‌ ಹರಡಿಕೊಂಡಿದ್ದರಿಂದ ಬೆಂಕಿ ಹೊತ್ತಿಕೊಂಡು ಮದನ್‌ ಜತೆಗೆ ನಿದ್ದೆಯಲ್ಲಿದ್ದ ಪತ್ನಿ ಹಾಗೂ ಮಕ್ಕಳಿಗೂ ಸುಟ್ಟ ಗಾಯಗಳಾಗಿವೆ. ಸ್ಫೋಟದ ಶಬ್ಧಕ್ಕೆ ನೆರೆಹೊರೆಯವರು ಓಡಿ ಬಂದು ನೋಡಿದಾಗ ಐವರೂ ಗಾಯಗೊಂಡು ಒದ್ದಾಡುವುದು ಕಂಡು ಬಂದಿದೆ. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಘಟನೆ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳ ಪರಿಶೀಲಿಸಿದರು. ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here