ಗಂಡ-ಹೆoಡತಿ ಕಲಹದಿಂದ ವಿವಿಧ ಘಟನೆಗಳು ಸಂಭವಿಸಿರುವುದು ನಾವು ಕೇಳಿದ್ದೇವೆ, ನೋಡಿದ್ದೇವೆ ಆದರೆ ತಾನು ಹೆತ್ತ ಇಬ್ಬರು ಪುಟ್ಟ ಮಕ್ಕಳನ್ನು ಕೈಯಾರೆ ಕತ್ತು ಹಿಸುಕಿ ಕೊಲೆ ಮಾಡಿರುವ ದುರ್ಘಟನೆ ನಂಬಲಸಾಧ್ಯವಾದರು ನಂಬಲೇಬೇಕು. ಹೆತ್ತಮ್ಮನೇ ಮಕ್ಕಳ ಜೀವನವನ್ನು ಮುಗಿಸಿಬಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಏಳು ವರ್ಷದ ಪ್ರಾಯದ ಶಂಭು ಹಾಗೂ ಮೂರು ವರ್ಷ ಪ್ರಾಯದ ಶಿಯಾ ಹೆತ್ತ ತಾಯಿಯ ಕೈಯಿಂದಲೇ ಪ್ರಾಣ ಕಳೆದುಕೊಂಡವರು. ಮಮತಾ ಸಾಹು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿ ಬದುಕಿ ಉಳಿದ ಮಹಿಳೆ.
ಜಾರ್ಖಾಂಡ್ ಮೂಲದ ಸುನಿಲ್ ಸಾಹು ಹಾಗೂ ಮಮತಾ ಸಾಹು ದಂಪತಿ ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಮಾಡಿಕೊಂಡಿದ್ದರು. ಸುನಿಲ್ ಸಾಹು ಆಟೋ ಓಡಿಸಿಕೊಂಡಿದ್ರೆ ಮಮತಾ ಗೃಹಿಣಿಯಾಗಿದ್ದಳು. ಪತಿ ಮೇಲೆ ಪತ್ನಿಗೆ ಅನುಮಾನ, ಬೇರೆ ಮಹಿಳೆ ಜೊತೆಗೆ ಫೋನಲ್ಲಿ ಮಾತಾಡ್ತಾನೆ ಅನ್ನೋ ಸಂಶಯ. ಇದು ಇವರಿಬ್ಬರ ಜಗಳಕ್ಕೆ ಕಾರಣವಾಗಿತ್ತು. ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೆಯುತ್ತಲೇ ಇತ್ತು. ನವಂಬರ್ 21ರ ಕೂಡ ಗಲಾಟೆ ನಡೆದಿದ್ದು, ನಂತರ ಗಂಡ ಕೆಲಸಕ್ಕೆ ಹೋದವನಿಗೆ ಅದೊಂದು ಫೋಟೊ ನಿಂತಲ್ಲೇ ನಡುಗುವಂತೆ ಹುಟ್ಟಿಸಿತ್ತು. ಆ ಫೋಟೊ ಅಷ್ಟೊಂದು ಭಯಾನಕವಾಗಿತ್ತು. ಮನೆಗೆ ಬಂದು ನೋಡಿದ ಸುನೀಲ್ ಗೆ ಕಂಡದ್ದು ಮಾತ್ರ ಭಯಾನಕ.
ಇಬ್ಬರು ಪುಟ್ಟ ಮಕ್ಕಳ ಕುತ್ತಿಗೆ ಬಿಗಿದು ಕೊಲೆ ಮಾಡಿದ ಸ್ಥಿತಿಯಲ್ಲಿದ್ರೆ ಪತ್ನಿಯ ಕತ್ತು ಸೀಳಿತ್ತು. ತಕ್ಷಣ ಪತ್ನಿಯನ್ನ ಆಸ್ಪತ್ರೆಗೆ ದಾಖಲಿಸಿದ್ದಾನೆ. ನಂತರ ಗಂಡನ ಮೇಲಿನ ಕೋಪಕ್ಕೆ ಇಬ್ಬರು ಮಕ್ಕಳನ್ನ ಸೆಣಬಿನ ದಾರದಿಂದ ಕತ್ತು ಬಿಗಿದು ಕೊಲೆ ಮಾಡಿ ನಂತರ ತಾನು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ದಾರ ತುಂಡಾಗಿ ಕೆಳಗೆ ಬಿದ್ದ ಕಾರಣ ಬಳಿಕ ಚಾಕುವಿನಿಂದ ಕತ್ತು ಕೊಯ್ದುಕೊಂಡಿದ್ದಾಳೆ. ಸದ್ಯ ಮಮತಾ ಸಾಹು ಆಸ್ಪತ್ರೆಗೆ ದಾಖಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೆ ಬದುಕಿ ಬಾಳಬೇಕಾದ ಪುಟ್ಟ ಜೀವಗಳು ದೇವರಪಾದ ಸೇರಿದೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.