ಬೆಂಗಳೂರು: ಗುಪ್ತಚರ ಇಲಾಖೆ ಹಾಗೂ ಸೇನಾ ಇಂಟಲಿಜೆನ್ಸ್ ವಿಭಾಗ ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಪಾಕಿಸ್ತಾನಕ್ಕೆ ರಕ್ಷಣಾ ಮಾಹಿತಿ ರವಾನಿಸುತ್ತಿದ್ದ ಗೂಢಚಾರನೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಉತ್ತರಪ್ರದೇಶದ ಗಾಜಿಯಾಬಾದ್ ಮೂಲದ ನಿವಾಸಿ, ಬಿಇಎಲ್ನಲ್ಲಿ ಕೆಲಸ ಮಾಡುತ್ತಿದ್ದ ದೀಪ್ ರಾಜ್ ಚಂದ್ರ ಎಂಬಾತನೇ ಬಂಧನಕ್ಕೊಳಗಾದ ವ್ಯಕ್ತಿ. ಈತ ಬಿಇಎಲ್ನ ಪ್ರಾಡಕ್ಟ್ ಡೆವಲಪ್ಮೆಂಟ್ ಆ್ಯಂಡ್ ಇನ್ನೋವೇಶನ್ ಸೆಂಟರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನ ಮತ್ತಿಕೆರೆ ಬಳಿ ನೆಲೆಸಿದ್ದ. ಈತ ಬಿಇಎಲ್ನಿಂದ ರಕ್ಷಣಾ ವಿಚಾರಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಎಂಬ ಆರೋಪವಿದೆ.
ಕೇಂದ್ರ ಮತ್ತು ರಾಜ್ಯ ಗುಪ್ತಚರ ಅಧಿಕಾರಿಗಳು, ಮಿಲಿಟರಿ ಇಂಟಲಿಜೆನ್ಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿವೆ.